ಬಳ್ಳಾರಿ: ಕಾಂಗ್ರೇಸ್ ಸರ್ಕಾರದ ವೈಫಲ್ಯದ ವಿರುದ್ದ ಬಿಜೆಪಿ ಹಮ್ಮಿಕೊಂಡಿದ್ದ ಬಳ್ಳಾರಿ ಪಾದಯಾತ್ರೆಯ ಸಮಾರೋಪ ಹಿನ್ನೆಲೆಯಲ್ಲಿ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಿದ್ದು, ನಗರದಲ್ಲಿ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.
ಸಮಾವೇಶಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಜಗ್ಗೇಶ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಹಲವು ನಾಯಕರು ಆಗಮಿಸಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ, ಶಾಸಕರಾದ ಹರೀಶ್ ಪೂಂಜಾ, ಬಿ.ಪಿ. ಹರೀಶ್ ಹಾಗೂ ಮಾಜಿ ಶಾಸಕ ಬಸವರಾಜ್ ದಡೆಸಗೂರ್ ಕೂಡ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಡಿ.ವಿ. ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ರಾಜುಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಕೇಕೆ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ವೇದಿಕೆಗೆ ಆಗಮಿಸಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದು ಗಮನ ಸೆಳೆಯಿತು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಈ ಕ್ಷಣಕ್ಕೆ ಕಾರ್ಯಕರ್ತರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
ಇನ್ನು ರಾಜ್ಯ ಸರ್ಕಾರದ ‘ವಂದೇ ಮಾತರಂ’ 2 ಚರಣಗಳನ್ನು ಮಾತ್ರ ಹಾಡುವ ಆದೇಶಕ್ಕೆ ಬಿಜೆಪಿ ತನ್ನದೇ ಶೈಲಿಯಲ್ಲಿ ತಿರುಗೇಟು ನೀಡಿದೆ. ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಹಾಡುವ ಮೂಲಕ ರಾಜ್ಯ ಸರ್ಕಾರದ ನಿಲುವಿಗೆ ಬಿಜೆಪಿ ಕೌಂಟರ್ ನೀಡಿದೆ. ವೇದಿಕೆ ಮುಂಭಾಗದಲ್ಲಿ ವಿಜಯೇಂದ್ರ, ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ಹಸಿರು ಟವಲ್ ಬೀಸಿದ್ದು, ಸಾವಿರಾರು ಕಾರ್ಯಕರ್ತರು ಕೂಡ ಹಸಿರು ಟವಲ್ ಬೀಸಿ ಸಂಭ್ರಮಿಸಿದರು.
ಡೋಲು, ಡಮರುಗಗಳ ಮೊಳಗುವಿಕೆ, ಘೋಷಣೆಗಳು ಹಾಗೂ ಶಂಖನಾದದ ನಡುವೆ ಬೃಹತ್ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಂಖನಾದ ಮೊಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಟ್ಟಿನಲ್ಲಿ ಬಳ್ಳಾರಿಯಲ್ಲಿ ನಡೆದ ಬಿಜೆಪಿ ಪಾದಯಾತ್ರೆಯ ಸಮಾರೋಪ ಸಮಾವೇಶ ಪಕ್ಷದ ಸಂಘಟನಾ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದ್ದು, ನಾಯಕರು ಮತ್ತು ಕಾರ್ಯಕರ್ತರ ಭರ್ಜರಿ ಉತ್ಸಾಹ ಗಮನ ಸೆಳೆಯುತ್ತಿದೆ.
