ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ (Winter Session) ಕೊನೆಗೂ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 2ರಿಂದ ಡಿಸೆಂಬರ್ 11ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಕುರಿತು ವಿಧಾನಸಭೆ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಈ ಬಾರಿ ಅಧಿವೇಶನದಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ವಿಶೇಷವೆಂದರೆ, ಶನಿವಾರವೂ ವಿಧಾನಸಭೆ ಕಲಾಪ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ.
ಉಪಚುನಾವಣೆ ಹಿನ್ನೆಲೆ ದಿನಾಂಕ ಬದಲಾವಣೆ
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕವನ್ನು ಬದಲಾಯಿಸಲಾಗಿದೆ. ಈ ಹಿಂದೆ ನವೆಂಬರ್ 30ರಿಂದ ಅಧಿವೇಶನ ಆರಂಭಿಸುವ ಕುರಿತು ನಿರ್ಧಾರ ಕೈಗೊಂಡು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಡತವನ್ನು ಕಳುಹಿಸಲಾಗಿತ್ತು.
ಆದರೆ, ಸರ್ಕಾರದ ಸೂಚನೆಯಂತೆ ಸಂಸದೀಯ ವ್ಯವಹಾರಗಳ ಇಲಾಖೆಯು ಹಿಂದಿನ ಕಡತವನ್ನು ವಾಪಸ್ ಪಡೆದುಕೊಂಡಿತ್ತು. ಬಳಿಕ ಡಿಸೆಂಬರ್ 2ರಿಂದ ಅಧಿವೇಶನ ಆರಂಭಿಸುವಂತೆ ಹೊಸ ದಿನಾಂಕ ನಿಗದಿಪಡಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಡತವನ್ನು ರವಾನಿಸಿತ್ತು.
ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ
ಚಳಿಗಾಲದ ಅಧಿವೇಶನದ ದಿನಾಂಕ ಬದಲಾವಣೆ ಕುರಿತು ನಡೆದ ಚರ್ಚೆಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ರೂಪ ನೀಡಲಾಗಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ಡಿಸೆಂಬರ್ 2ರಿಂದ 11ರವರೆಗೆ ಅಧಿವೇಶನ ನಡೆಸುವ ಕುರಿತು ಸರ್ಕಾರ ತೀರ್ಮಾನಿಸಿದ್ದು, ಒಟ್ಟು ಒಂಬತ್ತು ದಿನಗಳ ಕಾಲ ಕಲಾಪ ನಡೆಯಲಿದೆ. ಶನಿವಾರವೂ ಕಲಾಪ ನಡೆಸಲು ನಿರ್ಧರಿಸಿರುವುದು ಈ ಬಾರಿಯ ಅಧಿವೇಶನದ ವಿಶೇಷತೆಯಾಗಿದೆ.
