ಬೆಳಗಾವಿ ಆಕಾಶದಲ್ಲಿ ಕಂಡ ನಿಗೂಢ ಆಕೃತಿ: ಏಲಿಯನ್ಸ್ ಅಥವಾ ಯುಎಫ್‌ಒ..?

Untitled design 2026 01 03T170120.569

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಿನ್ನೆ ಸಂಜೆ ಒಂದು ವಿಚಿತ್ರವಾದ ವಸ್ತುವೊಂದು ಕಾಣಿಸಿದೆ. ಸಂಜೆ ವೇಳೆ ಆಕಾಶದಲ್ಲಿ ಕಾಣಿಸಿಕೊಂಡ ನಿಗೂಢ ಆಕೃತಿಯೊಂದು (Unidentified Flying Object – UFO) ಜನರಲ್ಲಿ ಭಾರೀ ಕುತೂಹಲ ಮಾತ್ರವಲ್ಲದೆ, ಒಂದು ರೀತಿಯ ನಿಗೂಢ ಆತಂಕವನ್ನೂ ಸೃಷ್ಟಿಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಈ ನಿಗೂಢ ವಸ್ತು ಸ್ಥಿರವಾಗಿ ಮತ್ತು ನಿಧಾನವಾಗಿ ಚಲಿಸಿರುವುದು ಸದ್ಯ ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.

ಗ್ರಾಮಸ್ಥರಲ್ಲಿ ಮೂಡಿದ ಆತಂಕ..!

ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ತೆಲಸಂಗ ಗ್ರಾಮದ ಕೆಲವರು ಮೊದಲು ಆಕಾಶದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಗೋಲಾಕಾರದ ವಸ್ತುವನ್ನು ಗಮನಿಸಿದರು. ಆರಂಭದಲ್ಲಿ ಇದು ಯಾವುದೋ ನಕ್ಷತ್ರ ಅಥವಾ ವಿಮಾನವಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಆ ವಸ್ತುವು ವಿಮಾನಕ್ಕಿಂತ ಭಿನ್ನವಾಗಿ ಒಂದೇ ಕಡೆ ಸ್ಥಿರವಾಗಿ ನಿಂತಿರುವುದು ಮತ್ತು ಅದರ ವಿಚಿತ್ರ ಆಕಾರವನ್ನು ಕಂಡಾಗ ಜನರಿಗೆ ಅನುಮಾನ ಶುರುವಾಯಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಗ್ರಾಮದಾದ್ಯಂತ ಹರಡಿ, ನೂರಾರು ಜನರು ರಸ್ತೆ ಮತ್ತು ಮನೆಯ ಮಹಡಿಗಳ ಮೇಲೆ ನಿಂತು ಆಕಾಶದತ್ತ ಕಣ್ಣಿಟ್ಟು ನೋಡತೊಡಗಿದರು.

ಏನಿದು ನಿಗೂಢ ವಸ್ತು?

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಆಕೃತಿಯು ಗೋಲಾಕಾರದಲ್ಲಿದ್ದು, ಆಗಾಗ್ಗೆ ತನ್ನ ಹೊಳಪನ್ನು ಬದಲಾಯಿಸುತ್ತಿತ್ತು. ಕೆಲವೊಮ್ಮೆ ಮೋಡಗಳ ನಡುವೆ ಮರೆಯಾಗುತ್ತಾ, ಮತ್ತೆ ಪ್ರತ್ಯಕ್ಷವಾಗುತ್ತಾ ಗ್ರಾಮಸ್ಥರನ್ನು ಬೆರಗುಗೊಳಿಸಿದೆ. ನಮ್ಮ ಗ್ರಾಮಕ್ಕೆ ಏಲಿಯನ್ಸ್ (Aliens) ಬಂದಿರಬಹುದು ಅಥವಾ ಇದು ಇತರೆ ಬೇರೆ ಗ್ರಹ ಜೀವಿಗಳ ಹಾರುವ ತಟ್ಟೆ ಇರಬಹುದು ಎಂಬಂತಹ ಗಾಳಿ ಸುದ್ದಿಗಳು ಹರಡಿತ್ತು. ಅನೇಕ ಯುವಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜ್ಞಾನಿಗಳ ಮತ್ತು ಅಧಿಕಾರಿಗಳ ಅಭಿಪ್ರಾಯವೇನು ?

ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ತಾಂತ್ರಿಕ ಮಾಹಿತಿ ಲಭ್ಯವಾಗಿಲ್ಲ. ಹವಾಮಾನ ಇಲಾಖೆಯ ಬಲೂನ್ ಆಗಿರಬಹುದೇ ಅಥವಾ ಯಾವುದೋ ಸಂಶೋಧನಾ ಉಪಗ್ರಹದ ಭಾಗವೇ ಎಂಬ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತಿರುವ ಸ್ಥಳೀಯ ಅಧಿಕಾರಿಗಳು, ಇದು ಯಾವುದೇ ಅಪಾಯಕಾರಿ ವಸ್ತುವಲ್ಲದಿದ್ದರೂ ಇರಬಹುದು, ಜನರು ವದಂತಿಗಳಿಗೆ ಕಿವಿಗೊಡಬಾರದು. ವಿಜ್ಞಾನಿಗಳ ಸಲಹೆ ಪಡೆದು ಇದರ ಮೂಲ ತಿಳಿಯಲಾಗುವುದು ಎಂದು ಮನವಿ ಮಾಡಿದ್ದಾರೆ.

ಆಕಾಶದಲ್ಲಿ ಕಾಣಿಸಿಕೊಂಡ ಆ ಹೊಳೆಯುವ ವಸ್ತು ನಿಜಕ್ಕೂ ಏಲಿಯನ್ಸ್ ತಟ್ಟೆಯೇ ಅಥವಾ ಏನಿದು ಎಂದು ಜನರು ಕುತೂಹಲ ವ್ಯಕ್ರಪಡಿಸಿದ್ದಾರೆ ಈ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ ಕಾದು ನೋಡಬೇಕಿದೆ.

Exit mobile version