ಬೆಳಗಾವಿ, ಡಿಸೆಂಬರ್ 02: ರಾಜ್ಯದಾದ್ಯಂತ ಎಟಿಎಂ ಕಳ್ಳತನಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ ವಿಚಿತ್ರ ಕಳ್ಳತನದ ಘಟನೆ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಕಳ್ಳರು ಸಂಪೂರ್ಣ ಎಟಿಎಂ ಮಷೀನ್‌ನ್ನೇ ಅದರ ಸ್ಥಳದಿಂದ ಕಿತ್ತು, ತಳ್ಳುಗಾಡಿಯ ಮೂಲಕ ಸುಮಾರು 200 ಮೀಟರ್‌ಗಳ ದೂರ ಹೊತ್ತೊಯ್ದು ಪರಾರಿಯಾಗಿದ್ದಾರೆ.
ಈ ಆಘಾತಕಾರಿ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಹೊಸ ವಂಟಮೂರಿ ಗ್ರಾಮದ ಇಂಡಿಕ್ಯಾಶ್ ಎಟಿಎಂ ಕೇಂದ್ರದಲ್ಲಿ ನಡೆದಿದೆ. ಮೂವರು ಖದೀಮರು ಈ ಸಂಬಂಧ ಪ್ಲಾನ ಮಾಡಿ ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಮೊದಲು ಎಟಿಎಂ ಕೊಠಡಿಯೊಳಗೆ ಪ್ರವೇಶಿಸಿ, ಶಬ್ದವಾದರೆ ಅಲಾರಂ ಸದ್ದು ಮಾಡದಂತೆ ಮಷೀನ್‌ನಲ್ಲಿನ ಸೆನ್ಸಾರ್‌ಗಳು ಮತ್ತು ಸಿಸಿಸಿಟಿವಿ ಕ್ಯಾಮೆರಾಗಳ ಮೇಲೆ ‘ಬ್ಲಾಕ್ ಸ್ಪ್ರೇ’ ಬಳಸಿ ಅವನ್ನು ನಿಷ್ಕ್ರಿಯಗೊಳಿಸಿದರು. ಇದರಿಂದ ಅವರ ಚಲನವಲನ ಸ್ಪಷ್ಟವಾಗಿ ದಾಖಲಾಗಿಲ್ಲ ಜೊತೆಗೆ ಅಲಾರಂ ಕೂಡ ಸದ್ದು ಮಾಡಿಲ್ಲ.
ನಂತರ, ಕಳ್ಳರು ಎಟಿಎಂ ಮಷೀನ್‌ನ್ನನ್ನು ಅದರ ಬುಡದಿಂದ ಕಿತ್ತು ತೆಗೆದರು. ಮಷೀನ್‌ನ್ನು ಕತ್ತರಿಸಿ ಹಣವನ್ನು ಮಾತ್ರ ತೆಗೆಯದೆ, ಸಂಪೂರ್ಣ ಎಟಿಎಂ ಮಷೀನ್‌ನನ್ನೇ ದ್ವಂಸಗೊಳಿಸಿದ್ದಾರೆ. ಈ ಘಟನೆ ಸ್ಥಳೀಯ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಕಳ್ಳರು ತಾವೇ ತಂದಿದ್ದ ಒಂದು ತಳ್ಳುಗಾಡಿ (ಟ್ರಾಲಿ)ಗೆ ಭಾರೀ ಎಟಿಎಂ ಮಷೀನ್‌ನ್ನನ್ನುಇರಿಸಿ, ನಂತರ, ಸಾಮಾನ್ಯ ಕಾರ್ಮಿಕರಂತೆ ನಟಿಸಿ, ಸುಮಾರು 200 ಮೀಟರ್ ದೂರವನ್ನು ಆ ತಳ್ಳುಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾರೆ. ಹೀಗಾಗಿ ಜನರು ಹೆಚ್ಚು ಇವರ ಬಗ್ಗೆ ಗಮನಿಸಿಲ್ಲ.
ಸುಮಾರು 200 ಮೀಟರ್ ಹೋದ ಬಳಿಕ, ಅವರು ಪೂರ್ವಯೋಜನೆಯಂತೆ ನಿಲ್ಲಿಸಿದ್ದ ತಮ್ಮ ವಾಹನದಲ್ಲಿ ಮಷೀನ್‌ನ್ನನ್ನು ಶಿಫ್ಟ್ ಮಾಡಿಕೊಂಡು, ತಳ್ಳುಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಇಡೀ ಘಟನೆಯೂ ಅವರು ಓಡಾಡಿದ ಕೆಲವು ಸ್ಥಳಗಳ ಸಿಸಿಟಿವಿ ದೃಶ್ಯದಲ್ಲೆ ಸೆರೆಯಾಗಿವೆ.
ಕಳ್ಳತನವಾದ ಎಟಿಎಂನಲ್ಲಿ ಒಂದು ಲಕ್ಷ ರೂಪಾಯಿಗಳಿಗೂ ಅಧಿಕ ಹಣವಿತ್ತೆಂದು ಅಂದಾಜು ಮಾಡಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯರು ಕಾಕತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕಳ್ಳತನದ ಹೊಸ ತಂತ್ರವನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲಾಗಿದೆ.
