ಬೆಂಗಳೂರು, ನವೆಂಬರ್ 07: ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಇಂದು (ನ.07) ಮಧ್ಯಾಹ್ನ 3 ಗಂಟೆಯಿಂದ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಭಾರೀ ಮೆರವಣಿಗೆ ನಡೆಯಲಿದ್ದು, ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿ, ಸಾರ್ವಜನಿಕರಿಂದ ಸಹಕಾರ ಕೋರಿದ್ದಾರೆ.
ಮೆರವಣಿಗೆ ಆಯೋಜನೆ
ಬೊಮ್ಮನಹಳ್ಳಿ ಮುಸ್ಲಿಂ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗೊಂಡಿವೆ. ಸಾವಿರಾರು ಮಂದಿ ಭಾಗವಹಿಸುವ ಈ ಮೆರವಣಿಗೆ ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಮೂಲಕ ಸಾಗಲಿದೆ. ಮದೀನ ನಗರದ ಮೆಕ್ಕಾ ಮಸೀದಿಯಿಂದ ಪ್ರಾರಂಭವಾಗುವ ಈ ಮೆರವಣಿಗೆ 17 ರಿಂದ 20 ಸ್ತಬ್ಧಚಿತ್ರ ವಾಹನಗಳೊಂದಿಗೆ ಸಾಗಲಿದೆ.
ಮೆರವಣಿಗೆ ಮಾರ್ಗ
ಮದೀನ ನಗರದಲ್ಲಿರುವ ಮೆಕ್ಕಾ ಮಸೀದಿಯಿಂದ ಮೆರವಣಿಗೆ ಪ್ರಾರಂಭವಾಗಿ, ಮಂಗಮ್ಮನಪಾಳ್ಯ ಮುಖ್ಯರಸ್ತೆ ಮೂಲಕ ಹೊಸೂರು ರಸ್ತೆ ಸರ್ವಿಸ್ ರಸ್ತೆ ಭಾಗವನ್ನು ಸೇರುತ್ತದೆ. ಅಲ್ಲಿಂದ ಮಂಗಮ್ಮನಪಾಳ್ಯ ಬಸ್ ನಿಲ್ದಾಣದ ಬಳಿಯ ಹೊಸೂರು ಮುಖ್ಯರಸ್ತೆಗೆ ತಲುಪಿ, 21ನೇ ಪಿಲ್ಲರ್ ಬಳಿ ಯೂ-ಟರ್ನ್ ಪಡೆದು ಬೊಮ್ಮನಹಳ್ಳಿ ಜಂಕ್ಷನ್ ಕಡೆ ಸಾಗುತ್ತದೆ. ಅಂತಿಮವಾಗಿ ಮೆರವಣಿಗೆ ಬೇಗೂರು ರಸ್ತೆಯ ಜಾಮೀಯ ಮಸೀದಿಯ ಹಿಂಭಾಗದಲ್ಲಿರುವ ಉರ್ದು ಶಾಲೆಯ ಬಳಿ ಅಂತ್ಯಗೊಳ್ಳಲಿದೆ.
ಮೆರವಣಿಗೆ ವೇಳೆ ಹೊಸೂರು ರಸ್ತೆ, ಬೊಮ್ಮನಹಳ್ಳಿ ಜಂಕ್ಷನ್, ರೂಪೇನ ಅಗ್ರಹಾರ ಹಾಗೂ ಗಾರೇಭಾವಿಪಾಳ್ಯ ಜಂಕ್ಷನ್ ಭಾಗಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ಈ ಮಾರ್ಗಗಳಲ್ಲಿ ಬೆಂಗಳೂರು ನಗರದಿಂದ ಹೊರಹೋಗುವ ಅಥವಾ ನಗರ ಪ್ರವೇಶಿಸುವ ವಾಹನ ಸವಾರರು ಕೆಲವು ಗಂಟೆಗಳ ಕಾಲ ತೊಂದರೆ ಅನುಭವಿಸಬಹುದು. ಹೀಗಾಗಿ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ಬಳಕೆಗೆ ಕರೆ ನೀಡಿದ್ದಾರೆ.
ಪರ್ಯಾಯ ಮಾರ್ಗಗಳು:
-
ವಿಲ್ಸನ್ ಗಾರ್ಡನ್, ಆಡುಗೋಡಿ ಕಡೆಯಿಂದ ಬರುವ ವಾಹನಗಳು : ಡೈರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆಗೆ ಸಾಗಬಹುದು; ಅಲ್ಲಿಂದ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ತಲುಪಬಹುದು.
-
ಬನಶಂಕರಿ ಕಡೆಯಿಂದ ಬರುವ ವಾಹನಗಳು : ಡಬಲ್ ಡೆಕ್ಕರ್ ಮಾರ್ಗದಿಂದ ಜಯದೇವ ಜಂಕ್ಷನ್ ವರೆಗೆ ಬಂದು ಬಲ ತಿರುಗಿ ಬನ್ನೇರುಘಟ್ಟ ರಸ್ತೆ ಮೂಲಕ ಸಾಗಬೇಕು; ನಂತರ ನೈಸ್ ರೋಡ್ ಹಿಡಿದು ಹೊಸೂರು ರಸ್ತೆಗೆ ಹೋಗಬಹುದು.
-
ಹೊರವರ್ತುಲ ರಸ್ತೆ ಮಾರತಹಳ್ಳಿ ಕಡೆಯಿಂದ ಬರುವ ವಾಹನಗಳು : 27ನೇ ಮುಖ್ಯರಸ್ತೆಯಿಂದ ಎಡ ತಿರುವು ಪಡೆದು ವೇಮನ ಜಂಕ್ಷನ್, ಸೋಮಸುಂದರ್‌ಪಾಳ್ಯ ಮಾರ್ಗವಾಗಿ ಕೂಡ್ಲು ಹಾದಿ ಹಿಡಿದು ಹೊಸೂರು ಮುಖ್ಯರಸ್ತೆ ಸೇರುವುದು ಸೂಕ್ತ.
-
ಹೊಸೂರು ಕಡೆಯಿಂದ ನಗರ ಪ್ರವೇಶಿಸುವ ವಾಹನಗಳು : ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ರೈಓವರ್ (flyover) ಮೂಲಕ ಪ್ರಯಾಣಿಸಬಹುದು, ಈ ಮಾರ್ಗವು ಸಂಚಾರ ತೊಂದರೆಯಿಂದ ಮುಕ್ತವಾಗಿರುತ್ತದೆ.





