ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ (Stray Dogs) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾಯಿಗಳ ದಾಳಿ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 55ರಷ್ಟು ಏರಿಕೆ ಕಂಡುಬಂದಿದೆ.
2026 ರ ಮೊದಲ ಐದು ತಿಂಗಳ ಅವಧಿಯಲ್ಲೇ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಬರೋಬ್ಬರಿ 18,140 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅಂದರೆ 2025ರ ಇದೇ ಅವಧಿಯಲ್ಲಿ (ಹಳೆಯ ಬಿಬಿಎಂಪಿ ವ್ಯಾಪ್ತಿ) ಈ ಸಂಖ್ಯೆ 11,647 ಆಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ದಾಖಲಾದ ಈ ಬೃಹತ್ ಜಿಗಿತವು ನಗರದ ನಿವಾಸಿಗಳು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
ನಗರದ ವಿವಿಧ ಭಾಗಗಳಲ್ಲಿ ಬೀದಿನಾಯಿಗಳ ಗುಂಪುಗಳು ಹೆಚ್ಚಾಗುತ್ತಿದ್ದು, ಮಕ್ಕಳು, ವೃದ್ಧರು ಮತ್ತು ಬೆಳಗಿನ ಜಾವ ಓಡಾಡುವ ಜನರು ಹೆಚ್ಚಿನ ಆತಂಕದಲ್ಲಿದ್ದಾರೆ. ದಿನಕ್ಕೆ ಸರಾಸರಿ ನೂರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ ಎನ್ನಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ಕ್ರಮಗಳ ಅಗತ್ಯವಿದೆ.
ಈ ಪ್ರಕರಣಗಳ ಏರಿಕೆಗೆ ಬೀದಿನಾಯಿಗಳ ದಾಳಿ ಹೆಚ್ಚಾಗಿರುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿರುವುದೂ ಒಂದು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೆ ಸಣ್ಣ ಗೀರು ಅಥವಾ ಸಣ್ಣ ಕಡಿತದ ಘಟನೆಗಳನ್ನು ಅನೇಕರು ವರದಿ ಮಾಡದೇ ಇರಬಹುದಾಗಿತ್ತು. ಆದರೆ ಈಗ ರೇಬೀಸ್ ಅಪಾಯದ ಬಗ್ಗೆ ಅರಿವು ಹೆಚ್ಚಿರುವುದರಿಂದ ಜನರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಕರಣಗಳು ಅಧಿಕೃತ ದಾಖಲೆಗಳಲ್ಲಿ ಸೇರುತ್ತಿವೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ (ABC – Animal Birth Control) ಹಾಗೂ ರೇಬೀಸ್ ನಿಯಂತ್ರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ರೇಬೀಸ್ ರೋಗವನ್ನು ಕಡ್ಡಾಯವಾಗಿ ವರದಿ ಮಾಡಬೇಕಾದ ಕಾಯಿಲೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು, ಲಸಿಕೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಮತ್ತು ಸಾರ್ವಜನಿಕ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಸ್ಥಳೀಯ ಆಡಳಿತದ ಪ್ರಮುಖ ಜವಾಬ್ದಾರಿಯಾಗಿದೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ನಾಯಿ ದಾಳಿ ಪ್ರಕರಣಗಳು ನಾಗರಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸಮಗ್ರ ಯೋಜನೆ ರೂಪಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.
