ಬೆಂಗಳೂರಿನಲ್ಲಿ ಕಳ್ಳರ ಕೈಚಳಕ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದರೋಡೆ, ಮನೆ ಕಳ್ಳತನ ಮಾತ್ರವಲ್ಲದೆ, ವಂಚನೆ ಹೆಸರಿನಲ್ಲಿ ಹಾಡು ಹಗಲೇ ಕಳ್ಳತನ ನಡೆಯುತ್ತಿದೆ. ಅಂತೆಯೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇತ್ತೀಚಿಗೆ ಚಿನ್ನ ಖರೀದಿಸುವ ನೆಪದಲ್ಲಿ 1, ಕೆಜಿ 8 ಗ್ರಾಂ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಪರೇಶ್ ಸೋನಿ, ಪ್ರವೀಣ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಈ ಇಬ್ಬರು ಆರೋಪಿಗಳು ‘ಲೋಟಸ್ ಜ್ಯುವೆಲ್ಲರಿ’ ಹೆಸರಿನಲ್ಲಿ ಫೇಕ್ ಆಫೀಸ್ ತೆರೆದಿದ್ದರು. 3 ಕೆಜಿ ಚಿನ್ನ ಬೇಕೆಂದು ವ್ಯಾಪಾರ ಮಾತುಕತೆಗಾಗಿ ನಾಗರತ್ನಪೇಟೆಯ ಮೆಹ್ತಾ ಜ್ಯುವೆಲ್ಲರಿಯ ಸೇಲ್ಸ್ ಮ್ಯಾನೇಜರ್‌ರನ್ನು ತಮ್ಮ ನಕಲಿ ಕಚೇರಿಗೆ ಕರೆಸಿಕೊಂಡ ಆರೋಪಿಗಳು, ಅಲ್ಲಿಂದ 1 ಕೆಜಿ 850 ಗ್ರಾಂ ಚಿನ್ನಾಭರಣವನ್ನು ವಂಚನೆಯ ಮೂಲಕ ಪಡೆದು ಪರಾರಿಯಾಗಿದ್ದರು.
ಈ ವಂಚನೆ ತಮ್ಮ ಅರಿವಿಗೆ ಬರುತ್ತಿದ್ದಂತೆ ಘಟನೆ ಕುರಿತು ಮೆಹ್ತಾ ಜ್ಯುವೆಲ್ಲರಿಯ ಸೇಲ್ಸ್ ಮ್ಯಾನೇಜರ್ ಮಹೇಂದ್ರ ಕುಮಾರ್ ಜೈನ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಿದ್ದರು. ಆದರೆ ವಂಚಕರು ಘಟನೆಯ ಬಳಿಕ ತಲೆ ತಪ್ಪಿಸಿಕೊಂಡಿದ್ದರು. ಇದೀಗ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳುವಾದ ಚಿನ್ನಾಭರಣಗಳ ಮೌಲ್ಯ ಸುಮಾರು 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಇಬ್ಬರು ಆರೋಪಿಗಳು ಕದ್ದ ಚಿನ್ನವನ್ನು ಮುಂಬಯಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳ ಹಿನ್ನೆಲೆ, ವಂಚನೆ ನಡೆಸಿದ ವಿಧಾನ ಮತ್ತು ಚಿನ್ನದ ಮಾರಾಟ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
