ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು 40 ಕೋಟಿ ರೂಪಾಯಿ ಮೌಲ್ಯದ 4 ಕಿಲೋಗ್ರಾಂಗಿಂತಲೂ ಹೆಚ್ಚು ಕೊಕೇನ್ ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಓರ್ವ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ವಿವರ
ಜುಲೈ 18ರಂದು ದೋಹಾದಿಂದ ಬೆಂಗಳೂರಿಗೆ ಆಗಮಿಸಿದ ಭಾರತೀಯ ಮೂಲದ ಪ್ರಯಾಣಿಕನನ್ನು ಡಿಆರ್‌ಐನ ಬೆಂಗಳೂರು ವಲಯ ಘಟಕವು ತಡೆಹಿಡಿಲಾಯಿತು. ಪ್ರಯಾಣಿಕನ ಲಗೇಜ್ ತಪಾಸಣೆಯ ಸಂದರ್ಭದಲ್ಲಿ, ಡಿಆರ್‌ಐ ಅಧಿಕಾರಿಗಳಿಗೆ ಬಳಕೆಯಾಗದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಸಿಕ್ಕಿವೆ. ಈ ಮ್ಯಾಗಜೀನ್‌ಗಳ ಕವರ್‌ನಲ್ಲಿ ಸೀಲ್ ಮಾಡಿದ ರೀತಿಯಲ್ಲಿ ಬಿಳಿ ಬಣ್ಣದ ಪೌಡರ್ ಇರುವುದು ಕಂಡುಬಂದಿತ್ತು. ಈ ಪೌಡರ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದು ಕೊಕೇನ್ ಎಂದು ದೃಢವಾಯಿತು.
ಪರೀಕ್ಷೆಯಲ್ಲಿ ಒಟ್ಟು 4 ಕಿಲೋಗ್ರಾಂಗಿಂತಲೂ ಹೆಚ್ಚು ಕೊಕೇನ್ ಇರುವುದು ದೃಢವಾಗಿದ್ದು, ಇದರ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಈ ಕೊಕೇನ್ ಅನ್ನು ನಾರ್ಕೋಟಿಕ್ಸ್ ಡ್ರಗ್ಸ್ ಆಂಡ್ ಸೈಕೊಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಪ್ತಿಯ ನಂತರ, ಆರೋಪಿಯನ್ನು NDPS ಕಾಯ್ದೆಯಡಿಯಲ್ಲಿ ಬಂಧಿಸಲಾಯಿತು. ಡಿಆರ್‌ಐ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕೊಕೇನ್ ಸಾಗಾಟದ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ಪ್ರಯತ್ನದಲ್ಲಿದ್ದಾರೆ. ವಿಚಾರಣೆಯ ನಂತರ, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.