ಬಾಗಲಕೋಟೆ: ತಲೆಪೂರ್ತಿ ಕೂದಲಿದ್ದರೆ ಹೆಂಡತಿ ಹಿಂದೆ ಬೇರೆ ಗಂಡಸರು ಬೀಳುತ್ತಾರೆಂದು ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಆಕೆಯ ಪತಿ, ಮಡದಿಯ ತಲೆಗೂದಲನ್ನು ಬಲವಂತವಾಗಿ ಬೋಳಿಸಿ ವಿಕೃತಿ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ
ತೊದಲಬಾಗಿ ಗ್ರಾಮದ ನಿವಾಸಿ ಉಮೇಶ್ (31) ತನ್ನ ಹೆಂಡತಿ ಲಕ್ಷ್ಮೀಬಾಯಿ (26) ಶೀಲದ ಮೇಲೆ ಇಲ್ಲಸಲ್ಲದ ಅನುಮಾನಗೊಂಡಿದ್ದ. ಇದೇ ವಿಚಾರವಘಿ ಇಬ್ಬರನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನಗೆ ತಲೆ ತುಂಬಾ ಕೂದಲಿದ್ದರೆ ಸುಂದರವಾಗಿ ಕಾಣುತ್ತೀಯಾ, ನಿನ್ನ ಹಿಂದೆ ಹುಡುಗರು ಬೀಳುತ್ತಾರೆ ಎಂದು ಆಕೆಗೆ ಪ್ರತಿದಿನ ದೈಹಿಕ ಹಾಗೂ ಮಾನಸಿಕ ಕಿರುಕುಲ ನೀಡುತ್ತಿದ್ದನು.
ಘಟನೆ ನಡೆದ ದಿನ ರಾತ್ರಿ ಉಮೇಶ್ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದನು. ಎಂದಿನಂತೆ ಪತ್ನಿಯೊಂದಿಗೆ ಕ್ಯಾತೆ ತೆಗೆದ ಈತ, ಜಗಳ ವಿಕೋಪಕ್ಕೆ ಹೋದಾಗ ಮನೆಯಲ್ಲಿದ್ದ ಕಬ್ಬು ಕಡಿಯುವ ಹರಿತವಾದ ಆಯುಧವನ್ನು ತಂದಿದ್ದಾನೆ. ಅದನ್ನು ಪತ್ನಿಯ ಕುತ್ತಿಗೆಗೆ ಇಟ್ಟು, ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಸಿದ್ದಾನೆ. ಬಳಿಕ ಪ್ರಾಣಭಯ ಹೊಂದಿದ್ದ ಪತ್ನಿಯ ಕೂದಲನ್ನು ಬಲವಂತವಾಗಿ ಹಿಡಿದು ಎಳೆದಾಡಿ, ಸಂಪೂರ್ಣವಾಗಿ ತಲೆ ಬೋಳಿಸಿದ್ದಾನೆ.
ಉಮೇಶನ ಈ ರೀತಿಯ ವರ್ತನೆ ಹಾಗೂ ಆತ ಪತ್ನಿ ಮೇಲೆ ಹೊಂದಿದ್ದ ಸಂಶಯದ ,ಲಕ್ಷ್ಮೀಬಾಯಿ ಅವರ ತವರು ಮನೆಯವರಿಗೂ ತಿಳಿದಿತ್ತು. ಹಲವು ಬಾರಿ ಹಿರಿಯರು ಕುಳಿತು ಉಮೇಶನಿಗೆ ಬುದ್ಧಿವಾದ ಹೇಳಿ ಸಂಸಾರ ಸರಿಪಡಿಸಲು ಪ್ರಯತ್ನಿಸಿದ್ದರು. ಆದರೆ, ಮದ್ಯಪಾನದ ಚಟಕ್ಕೆ ಬಿದ್ದಿದ್ದ ಉಮೇಶ್, ಯಾರ ಮಾತಿಗೂ ಕಿವಿಗೊಡದೆ ತನ್ನ ಪತ್ನಿ ಮೇಲೆ ಅನುಮಾನಗೊಂಡು ಪದೇ ಪದೇ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ.
ಪೊಲೀಸ್ ಕ್ರಮ ಮತ್ತು ಗ್ರಾಮಸ್ಥರ ಆಕ್ರೋಶ
ವಿಷಯ ತಿಳಿಯುತ್ತಿದ್ದಂತೆಯೇ ತೊದಲಬಾಗಿ ಗ್ರಾಮದ ಜನರು ಈ ಕ್ರೂರ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾವಳಗಿ ಪೊಲೀಸ್ ಠಾಣೆಯ ಅಧಿಕಾರಿಗಳು ನೊಂದ ಮಹಿಳೆಯ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿ ಉಮೇಶನನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನೊಂದ ಮಹಿಳೆ ತಮಗಾದ ಅವಮಾನ ಮತ್ತು ಪತಿಯ ಕಿರುಕುಳದಿಂದ ಕಂಗಾಲಾಗಿದ್ದು, ಅವರಿಗೆ ಸಾಂತ್ವನ ಹೇಳುವ ಕೆಲಸ ನಡೆಯುತ್ತಿದೆ.
