ಡಿಕೆಶಿ ರಾಜಕೀಯ ಕಾರ್ಯದರ್ಶಿಯಾಗಿ ಪೊನ್ನಣ್ಣ ನೇಮಕ!

ಅದ್ವೈತ್ (10)

ಬೆಂಗಳೂರು (ಆ. 12): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನೇಮಕದೊಂದಿಗೆ ಪೊನ್ನಣ್ಣ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವೂ ದೊರೆಯಲಿದೆ.

ಈ ಹಿಂದೆ ಎ.ಎಸ್. ಪೊನ್ನಣ್ಣ ಅವರ ಹೆಸರನ್ನು ವಿಧಾನಸಭೆ ಉಪಾಧ್ಯಕ್ಷರ ಹುದ್ದೆಗೆ ಪರಿಗಣಿಸಲಾಗಿತ್ತು. ಹೈಕಮಾಂಡ್ ಮಟ್ಟದಲ್ಲಿ ಪ್ರಕಟವಾಗಿದ್ದ ಪಟ್ಟಿಯಲ್ಲೂ ಸ್ಪೀಕರ್, ಸಭಾಪತಿ ಹಾಗೂ ಉಪಾಧ್ಯಕ್ಷರ ಹುದ್ದೆಗಳ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಪೊನ್ನಣ್ಣ ಅವರ ಹೆಸರನ್ನು ಬದಲಾಯಿಸಲಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪೊನ್ನಣ್ಣ ಅವರು ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಮುಡಾ ಪ್ರಕರಣ ಸೇರಿದಂತೆ ಹಲವು ಕಾನೂನು ವಿಚಾರಗಳಲ್ಲಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಪರವಾಗಿ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಈ ಮೂಲಕ ಕಾಂಗ್ರೆಸ್ ವಲಯದಲ್ಲಿ ಗಮನ ಸೆಳೆದಿದ್ದರು.

ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಹಸ್ತಾಂತರದ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವಿನ ಸಮನ್ವಯದಲ್ಲಿ ಪೊನ್ನಣ್ಣ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲೇ ಇದೀಗ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಂತಹ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೇ ಪೊನ್ನಣ್ಣ?

ಮೂಲಗಳ ಪ್ರಕಾರ, ಪೊನ್ನಣ್ಣ ಅವರು ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ. ಬದಲಿಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಇದೀಗ ಸಚಿವ ಸ್ಥಾನಕ್ಕೆ ಪರ್ಯಾಯವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ದೊರೆತಿದ್ದು, ಸಂಪುಟ ದರ್ಜೆಯ ಸ್ಥಾನಮಾನವೂ ಸಿಗಲಿದೆ.

ಆರ್.ವಿ. ದೇಶಪಾಂಡೆಗೆ ಸಂಪುಟ ದರ್ಜೆ ಸ್ಥಾನಮಾನ

ಇದೇ ವೇಳೆ ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹುದ್ದೆಗೆ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಲಾಗಿದೆ.

ಒಂದೆಡೆ ಪೊನ್ನಣ್ಣ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ, ಮತ್ತೊಂದೆಡೆ ದೇಶಪಾಂಡೆ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಿರುವುದು ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Exit mobile version