ಕಾವೇರಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಅಪಾಯಕಾರಿ..!

Untitled design 2025 10 22t193606.155

ರಾಜ್ಯದ ಪ್ರಮುಖ ನದಿಗಳ ನೀರು ಕುಡಿಯಲು ಮತ್ತು ದೈನಂದಿನ ಬಳಕೆಗೆ ಸಂಪೂರ್ಣವಾಗಿ ಅಸುರಕ್ಷಿತವಾಗಿದೆ ಎಂಬ ಚಿಂತಾಜನಕ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board – KSPCB) ಬಿಡುಗಡೆ ಮಾಡಿದೆ.

ಕರ್ನಾಟಕದ ಜಲಸಂಪತ್ತಿನ ಬಗ್ಗೆ ಎಚ್ಚರಿಕೆ ಸೂಚಿಸುವ ಈ ವರದಿಯು, ನದಿ ಮಾಲಿನ್ಯವು ಎಂತಹ ಗಂಭೀರ ಮಟ್ಟ ತಲುಪಿದೆ ಎಂಬುದನ್ನು ಬಹಿರಂಗಪಡಿಸಿದೆ. ವರದಿಯ ಮುಖ್ಯ ಅಂಶಗಳು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ 12 ಪ್ರಮುಖ ನದಿಗಳಲ್ಲಿ 32 ವಿವಿಧ ಸ್ಥಳಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿತು. ಈ ಪರೀಕ್ಷೆಯ ಫಲಿತಾಂಶಗಳು ಆತಂಕದ ಸಂಕೇತಗಳಾಗಿವೆ.

ನದಿ ಹಾಗೂ ಅದರ ದರ್ಜೆಗಕಳ ಹೀಗಿವೆ, ಪರೀಕ್ಷೆಗೆ ಒಳಪಟ್ಟ 12 ನದಿಗಳಲ್ಲಿ ಯಾವುದೇ ಒಂದು ನದಿಯ ನೀರಿಗೆ ‘ಎ’ ದರ್ಜೆ (ಪರಿಶುದ್ಧ ಕುಡಿಯುವ ನೀರು) ಸಿಗಲಿಲ್ಲ. ಇಡೀ ರಾಜ್ಯದಲ್ಲಿ, ಕೇವಲ ಒಂದೇ ಒಂದು ನದಿಯ ನೀರು ದ್ವಿತೀಯ ದರ್ಜೆಯದ್ದಾಗಿದೆ.  ಬಿ ದರ್ಜೆ (ಒಂದೇ ಒಂದು ನದಿ): ಕರಾವಳಿಯ ನೇತ್ರಾವತಿ ನದಿ ಮಾತ್ರ ಬಿ ದರ್ಜೆಯಲ್ಲಿ ಸ್ಥಾನ ಪಡೆದಿದೆ. ಇದರ ನೀರು ಸ್ನಾನ ಮಾಡಲು ಮತ್ತು ಗೃಹಬಳಕೆಗೆ ಮಾತ್ರ ಯೋಗ್ಯವೆಂದು ಪರಿಗಣಿಸಲಾಗಿದೆ. ಕುಡಿಯಲು ಶುದ್ಧೀಕರಣ ಅಗತ್ಯ. ಸಿ ದರ್ಜೆ (6 ನದಿಗಳು): ಈ ದರ್ಜೆಯ ನೀರು ಕುಡಿಯಲು ಯೋಗ್ಯವಲ್ಲ, ಆದರೆ ಸೀಮಿತ ಮಟ್ಟದಲ್ಲಿ ಮತ್ಸ್ಯೋದ್ಯಮ ಮತ್ತು ಕೈಗಾರಿಕಾ ಬಳಕೆಗೆ ಉಪಯುಕ್ತ. ಈ ಪಟ್ಟಿಯಲ್ಲಿ ಲಕ್ಷ್ಮಣತೀರ್ಥ, ತುಂಗಾಭದ್ರ, ಕಾವೇರಿ, ಕಬಿನಿ, ಕೃಷ್ಣಾ, ಮತ್ತು ಶಿಂಷಾ ನದಿಗಳಿವೆ. ಡಿ ದರ್ಜೆ (3 ನದಿಗಳು): ಇದು ಅತೀ ಕೆಟ್ಟ ದರ್ಜೆ. ಈ ನದಿಗಳ ನೀರು ಕುಡಿಯಲು, ಸ್ನಾನ ಮಾಡಲು ಅಥವಾ ಯಾವುದೇ ರೀತಿಯ ಗೃಹಬಳಕೆಗೆ ಸಹ ಯೋಗ್ಯವಲ್ಲ. ಇವುಗಳ ನೀರನ್ನು ಕೆಲವೇ ಕೆಲವು ಕೈಗಾರಿಕಾ ಉದ್ದೇಶಗಳಿಗೆ ಮಾತ್ರ ಬಳಸಬಹುದು. ಭೀಮನದಿ, ಕಾಗಿಣಿ, ಮತ್ತು ಅರ್ಕಾವತಿ ನದಿಗಳು ಈ ಗಂಭೀರ ವರ್ಗದಲ್ಲಿ ಸೇರಿವೆ.

ಮಾಲಿನ್ಯದ ಮೂಲ ಕಾರಣಗಳು ವರದಿಯು ನದಿ ನೀರಿನ ಗುಣಮಟ್ಟ ಕೆಡುವ ಹಿಂದಿನ ಮುಖ್ಯ ಕಾರಣಗಳನ್ನು ಸೂಚಿಸಿದೆ. ನದಿಗಳಲ್ಲಿ ರಾಸಾಯನಿಕ ಆಮ್ಲಜನಕದ (Dissolved Oxygen) ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರರ್ಥ ಜಲಚರ ಜೀವಗಳ ಅಸ್ತಿತ್ವಕ್ಕೆ ಅಗತ್ಯವಾದ ಆಮ್ಲಜನಕ ಇಲ್ಲವೇ ಇಲ್ಲದಂತಾಗಿದೆ. ಇದರ ಜೊತೆಗೆ, ಕೋಲಿಫಾರ್ಮ್ ಬ್ಯಾಕ್ಟೀರಿಯಾ ಅತಿ ಹೆಚ್ಚಿನ ಮಟ್ಟದಲ್ಲಿ ಪತ್ತೆಯಾಗಿದೆ, ಇದು ಮಾನವ ಮತ್ತು ಪ್ರಾಣಿಗಳ ಮಲದಿಂದ ನೀರು ಕಲುಷಿತವಾಗಿದೆ ಎಂಬ ಸೂಚನೆಯಾಗಿದೆ. ಈ ಬ್ಯಾಕ್ಟೀರಿಯಾ ಟೈಫಾಯ್ಡ್, ಭೇದಿ, ಹೆಪಟೈಟಿಸ್-ಎ ನಂತರ ರೋಗಗಳನ್ನು ಉಂಟುಮಾಡಬಲ್ಲದು.

ಕಾವೇರಿ ವಿವಾದಕ್ಕೆ ಹೊಸ ತಿರುವು ‘ದಕ್ಷಿಣ ಭಾರತದ ಜೀವನದಿ’ ಎಂದು ಪೂಜಿಸಲ್ಪಡುವ ಕಾವೇರಿ ನದಿಯ ನೀರು ಸಿ ದರ್ಜೆಗೆ ಇಳಿದಿರುವುದು ಬಹಳ ಚಿಂತನೀಯ ವಿಷಯ. ಕರ್ನಾಟಕದಲ್ಲಿಯೇ ಕಾವೇರಿಯನ್ನು ಕಲುಷಿತಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಗುಣಮಟ್ಟ ಹೇಗಿರುತ್ತದೆ ಎಂಬ ಪ್ರಶ್ನೆ ಏಳುತ್ತಿದೆ.

ತಮಿಳುನಾಡು ರಾಜ್ಯ ಸರ್ಕಾರವು ಕಾವೇರಿ ನದಿಯ ನೀರನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಿ, ಶುದ್ಧೀಕರಿಸಿ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದು, ಈ ಹೊಸ ವರದಿಯು ಆ ವಿವಾದಕ್ಕೆ ಹೆಚ್ಚಿನ ಬಲ ನೀಡುತ್ತದೆ.

Exit mobile version