ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅರವಿಂದ ಬೆಲ್ಲದ್ ವಾಗ್ದಾಳಿ

Untitled design (98)

ಆರ್‌ಎಸ್‌ಎಸ್‌ಗೆ ಪತ್ರ ಬರೆದಿರುವ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಧಾರವಾಡದಲ್ಲಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಸಚಿವ ಸ್ಥಾನ ನಿರ್ವಹಿಸುವ ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಹೊರಹೊಮ್ಮಿರುವ ಅವರು ದೇಶಾದ್ಯಂತ ಸುದ್ದಿಯಾಗುವ ಉದ್ದೇಶದಿಂದ ಇಂತಹ ಸಣ್ಣಪುಟ್ಟ ಸ್ಟಂಟ್‌ಗಳಿಗೆ ಮುಂದಾಗಬಾರದು ಎಂದಿದ್ದಾರೆ.

ತಮ್ಮ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಹೆಸರು ಮಾಡಲಿ. ಎಲ್ಲರ ಗಮನ ಸೆಳೆಯಲು ಅನಗತ್ಯ ರಾಜಕೀಯ ಮಾಡುವ ಅಗತ್ಯವಿಲ್ಲ. ರಾಜ್ಯದ ಗೃಹ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಸಾಕಷ್ಟು ಅವಕಾಶಗಳಿವೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದ್ದು, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಮದ್ಯದ ಅಡ್ಡೆಗಳು, ಅಕ್ರಮ ಬೆಟ್ಟಿಂಗ್ ದಂಧೆ ಹೆಚ್ಚಾಗಿದೆ. ಪರವಾನಗಿ ಇಲ್ಲದವರಿಗೆ ಹಣ ಪಡೆದು ಗನ್‌ಗಳನ್ನು ಒದಗಿಸುವಂತಹ ಗಂಭೀರ ಪ್ರಕರಣಗಳೂ ನಡೆಯುತ್ತಿವೆ. ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯುವತ್ತ ಗೃಹ ಸಚಿವರು ಗಮನಹರಿಸಬೇಕು ಎಂದು ಬೆಲ್ಲದ್ ಒತ್ತಾಯಿಸಿದ್ದಾರೆ. “ದೀಪ ನಂದಿರುವ ಮನೆಯಲ್ಲೇ ದೀಪ ಬೆಳಗುವ ಕೆಲಸ ಮಾಡಲಿ. ಅದನ್ನು ಬಿಟ್ಟು ಹುಸಾಬರಿ ರಾಜಕೀಯಕ್ಕೆ ಮುಂದಾಗಬಾರದು. ಅವರ ರಾಜಕೀಯ ಭವಿಷ್ಯ ದೊಡ್ಡದಿದೆ. ಆದ್ದರಿಂದ ಸ್ಟಂಟ್ ಮಾಡುವ ಬದಲು ಜನಪರ ಕೆಲಸಗಳ ಮೂಲಕ ಗುರುತಿಸಿಕೊಳ್ಳಲಿ” ಎಂದರು.

ಗ್ಯಾರಂಟಿ ಯೋಜನೆಗಳ ಪರಿಶೀಲನೆ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಲ್ಲದ್, ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿದ್ದರಾಮಯ್ಯ ಅವರು ದಿವಾಳಿ ಸ್ಥಿತಿಯಲ್ಲಿರುವ ಸರ್ಕಾರವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಒಪ್ಪಿಸಿದ್ದಾರೆ. ಈ ಕಾರಣದಿಂದಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಕಡಿತ ಮಾಡುವ ಪ್ರಯತ್ನ ನಡೆಸುತ್ತಿದೆ. ನಿಜವಾದ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ಉದ್ದೇಶದಿಂದ ಮತ್ತೆ ಅರ್ಜಿ ಸಲ್ಲಿಸಲು ಸೂಚಿಸಲಾಗುತ್ತಿದೆ. ನಾಲ್ಕು ತಿಂಗಳವರೆಗೆ ಹಣ ಬಿಡುಗಡೆ ಮಾಡದೆ, ಸರಿಯಾದ ದಾಖಲೆಗಳನ್ನು ನೀಡಿದವರಿಗೂ ದಾಖಲೆಗಳಿಲ್ಲ ಎಂಬ ಕಾರಣ ನೀಡಿ ಹೊರಗಿಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ರೀತಿಯ ಕ್ರಮಗಳ ಮೂಲಕ ಸರ್ಕಾರ ಜನರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ. ಇನ್ನೂ ಎರಡು ವರ್ಷಗಳ ಕಾಲ ಈ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರದ ನಡೆ-ನುಡಿಗಳನ್ನು ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಜನರೇ ನೀಡಲಿದ್ದಾರೆ ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.

Exit mobile version