ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸರ್ಕಾರ: ಜಂಬೂಸವಾರಿಯಲ್ಲಿ ಅಭಿಮನ್ಯುವಿಗೆ ವಿಶೇಷ ಗೌರವ

ಪಶ್ಚಾತ್ತಾಪ (21)

ಮೈಸೂರು ದಸರಾ ಜಂಬೂಸವಾರಿಯ ಹೆಮ್ಮೆಯ ಗಜಪಡೆ ಸದಸ್ಯನಾಗಿರುವ ಅಭಿಮನ್ಯು ಆನೆಗೆ ರಾಜ್ಯ ಸರ್ಕಾರ ಮತ್ತೊಂದು ವಿಶೇಷ ಗೌರವ ನೀಡಿದೆ. ಸತತ ಆರು ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಸೇವೆಯಿಂದ ನಿವೃತ್ತಿ ನೀಡಲಾಗಿತ್ತು. ಇದರಿಂದ 2026ರ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಭಾಗವಹಿಸುವುದಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಅಭಿಮನ್ಯುವಿನ ದಸರಾ ಸೇವೆಯನ್ನು ಪರಿಗಣಿಸಿ, ಆತನನ್ನು ಕನಿಷ್ಠ ಕೊನೆಯ ಬಾರಿಗೆ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತರಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಅರ್ಜುನ ಆನೆಗೆ ನೀಡಿದ ರೀತಿಯಲ್ಲೇ ಅಭಿಮನ್ಯುವಿಗೂ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದರು. ಇದೀಗ ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಅಭಿಮನ್ಯುವಿಗೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಮಹತ್ವದ ಆದೇಶ ನೀಡಿದ್ದು, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯುವಿಗೆ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ದಸರಾ ಪರಂಪರೆಯಲ್ಲಿ ಅಭಿಮನ್ಯುವಿನ ಸೇವೆ ಅತ್ಯಂತ ವಿಶೇಷವಾಗಿದೆ. ಹಲವು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಭಿಮನ್ಯು, ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಮತ್ತು ಸಮರ್ಥವಾಗಿ ನಿರ್ವಹಿಸಿದ್ದಾನೆ. ಸತತ ಆರು ಬಾರಿ ಅಂಬಾರಿ ಹೊತ್ತು ಯಶಸ್ವಿಯಾದ ಹೆಗ್ಗಳಿಕೆ ಅಭಿಮನ್ಯುವಿನದಾಗಿದೆ. ಈ ಮೂಲಕ ನಾಡಿನ ಜನರ ಅಪಾರ ಪ್ರೀತಿ, ಅಭಿಮಾನ ಹಾಗೂ ಗೌರವವನ್ನು ಸಂಪಾದಿಸಿದ್ದಾನೆ.

60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಇತ್ತೀಚೆಗೆ ಗೌರವ ಹಾಗೂ ಬೀಳ್ಕೊಡುಗೆ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಹಲವು ವರ್ಷಗಳ ಅಮೂಲ್ಯ ಸೇವೆಯನ್ನು ಸ್ಮರಿಸಿ ಅಭಿಮನ್ಯುವಿಗೆ ಗೌರವ ಸಲ್ಲಿಸಲಾಗಿತ್ತು. ಆದರೆ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯುವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎಂಬ ಅಭಿಮಾನಿಗಳ ಆಶಯ ಮಾತ್ರ ಮುಂದುವರಿದಿತ್ತು.

ಅಭಿಮಾನಿಗಳ ಒತ್ತಾಯದ ಬೆನ್ನಲ್ಲೇ ಇದೀಗ ಸರ್ಕಾರದ ನಿರ್ಧಾರ ಹೊರಬಿದ್ದಿದ್ದು, 2026ರ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಮತ್ತೊಮ್ಮೆ ಗಜಪಡೆಯೊಂದಿಗೆ ಹೆಜ್ಜೆ ಹಾಕಲಿದ್ದಾನೆ. ನಿಶಾನೆ ಆನೆಯಾಗಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ದಸರಾ ಸೇವೆಗೆ ಗೌರವಪೂರ್ಣ ವಿದಾಯ ಹೇಳಲಿದ್ದಾನೆ.

ಅಭಿಮನ್ಯುವಿಗೆ ಅದ್ದೂರಿ ಗೌರವಗಳೊಂದಿಗೆ ಬೀಳ್ಕೊಡುಗೆ ನೀಡಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಸರ್ಕಾರದ ಈ ನಿರ್ಧಾರದಿಂದ ಮೈಸೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಅಭಿಮನ್ಯುವಿನ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಹೀಗಾಗಿ ಈ ಬಾರಿಯ ಜಂಬೂಸವಾರಿಯಲ್ಲಿ ಅಭಿಮನ್ಯುವಿನ ಉಪಸ್ಥಿತಿ ವಿಶೇಷ ಆಕರ್ಷಣೆಯಾಗಲಿದೆ.

Exit mobile version