ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ಅದರಂತೆ ಫೈನಲ್ ಪ್ರವೇಶಿಸುವ ತಂಡಗಳು ಮುಂದಿನ ವರ್ಷ ಜೂನ್ 11 ರಿಂದ 15 ರವರೆಗೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ರೇಸ್ಗೆ ಶ್ರೀಲಂಕಾ ತಂಡ ಎಂಟ್ರಿ ಕೊಟ್ಟಿದೆ. ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವುದರೊಂದಿಗೆ ಶ್ರೀಲಂಕಾ ತಂಡವು WTC ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ತನ್ನ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಇದೀಗ 48 ಅಂಕಗಳೊಂದಿಗೆ ಶ್ರೀಲಂಕಾ ತಂಡವು ಮೂರನೇ ಸ್ಥಾನ ಅಲಂಕರಿಸಿದೆ.

ಇದಾಗ್ಯೂ ದ್ವಿತೀಯ ಸ್ಥಾನಕ್ಕೇರಲು ಲಂಕಾ ಪಡೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಬೇಕು. ಹಾಗೆಯೇ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆಲ್ಲಬೇಕಾಗುತ್ತದೆ. ಏಕೆಂದರೆ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು 90 ಅಂಕಗಳೊಂದಿಗೆ ಒಟ್ಟು 62.5 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ.
ಹಾಗೆಯೇ ಟೀಮ್ ಇಂಡಿಯಾ 86 ಪಾಯಿಂಟ್ಸ್ಗಳೊಂದಿಗೆ 71.67 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಇಲ್ಲಿ ಅಂಕಗಳಿಗಿಂತ ಗೆಲುವು ಮತ್ತು ಡ್ರಾ ಪಂದ್ಯಗಳ ಫಲಿತಾಂಶಗಳು ಮುಖ್ಯವಾಗುತ್ತದೆ. ಹೀಗಾಗಿ ಒಟ್ಟು ಪಾಯಿಂಟ್ಸ್ಗಿಂತ ಅತೀ ಹೆಚ್ಚು ಶೇಕಡಾವಾರು ಹೊಂದಿರುವ ತಂಡಗಳು ಅಂಕ ಪಟ್ಟಿಯಲ್ಲಿ ಮೇಲಿನ ಸ್ಥಾನಗಳಲ್ಲಿವೆ.
ಅದರಂತೆ ಇದೀಗ 50 ರಷ್ಟು ಶೇಕಡಾವಾರು ಹೊಂದಿರುವ ಶ್ರೀಲಂಕಾ ತಂಡವು 62.5 ರಷ್ಟು ಗೆಲುವಿನ ಶೇಕಡಾವಾರು ಹೊಂದಿರುವ ಆಸ್ಟ್ರೇಲಿಯಾವನ್ನು ಹಿಂದಿಕ್ಕಬೇಕಿದ್ದರೆ ಮುಂಬರುವ ಟೆಸ್ಟ್ ಸರಣಿಗಳಲ್ಲಿ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಆಸೀಸ್ ಪಡೆಯನ್ನು ಹಿಂದಿಕ್ಕಿ ಶ್ರೀಲಂಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.