ನಮ್ಮ ಹೆಮ್ಮೆಯ ಟೀಂ ಇಂಡಿಯಾ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಅಂತರಾಷ್ಟ್ರೀಯ ಟಿ20ಗೆ ವಿದಾಯ ಹೇಳಿದ್ದಾರೆ. ಒಂದು ಕಡೆ ವಿಶ್ವಕಪ್ ಗೆದ್ದ ಸಂಭ್ರಮ, ಮತ್ತೊಂಡೆ ತಮ್ಮ ನೆಚ್ಚಿನ ಕ್ರಿಕೆಟಿಗರು ಮತ್ತೆ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಕಾಣಸಿಗುವುದಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿದೆ. ಟಿ20 ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ಸ್ಟಾರ್ ಆಟಗಾರರು ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಕೊಹ್ಲಿ, ರೋಹಿತ್ ಶರ್ಮಾ ಅಭಿಮಾನಿಗಳು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುತ್ತಾರೆ ಎಂಬ ಆತಂಕ ಕೂಡ ಬಿಸಿಸಿಐಗೆ ಇದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಎಲ್ಲರಿಗೂ ಶುಭ ಸುದ್ದಿ ನೀಡಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಲಾರ್ಡ್ಸ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಜಯ್ ಶಾ ಬಹಿರಂಗಪಡಿಸಿದ್ದಾರೆ. ಇದರಂತೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿ ಹೆಜ್ಜೆ ಇಡುತ್ತಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಭಾರತ ಹಿರಿಯ ಆಟಗಾರರ ಪ್ರದರ್ಶನ ಉತ್ತಮವಾಗಿದೆ. ಟೀಂ ಇಂಡಿಯಾ ಮುಂದಿನ ಗುರಿ 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆಲ್ಲುವುದು. 2024ರ ಟಿ20 ವಿಶ್ವಕಪ್ಗೆ ಆಯ್ಕೆಯಾದ ತಂಡವೇ ಬಹುತೇಕ ಎರಡೂ ಟೂರ್ನಿಗಳಲ್ಲಿ ಆಡುವ ನಿರೀಕ್ಷೆ ಇದೆ. ದೇಶದಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆ ಇಲ್ಲ. ಮೀಸಲು ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಗತ್ಯವಿದ್ದರೆ ನಾವು ಒಂದೇ ಬಾರಿಗೆ 3 ತಂಡಗಳನ್ನು ಆಯ್ಕೆ ಮಾಡಬಹುದು ಎಂದು ಜಯ್ ಶಾ ಹೇಳಿದ್ದಾರೆ.