- ಕನಸಲ್ಲೂ ಕೇಡು ಬಯಸದ ದರ್ಶನ್ ಕೊಲೆ ಮಾಡೋದುಂಟೆ?
- ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ನಾನು ಬಯಸುತ್ತೇನೆ
- ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ ನಟ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ, ಆರೋಪಿ ಸ್ಥಾನದಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತಾಗಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸದ್ಯ ಟಾಲಿವುಡ್ ನಟ ನಾಗಶೌರ್ಯ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಾವು ಕಂಡಂತೆ ದರ್ಶನ್ ಹೇಗೆ ಅನ್ನೋದನ್ನ ಪದಗಳಲ್ಲಿ ವಿವರಿಸುವ ಕೆಲಸ ಮಾಡಿದ್ದಾರೆ.
ಮೃತರ ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯ ಮರುಗುತ್ತೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ನಾನು ಬಯಸುತ್ತೇನೆ ಎಂದಿರುವ ನಾಗಶೌರ್ಯ, ಈ ವಿಷಯದಲ್ಲಿ ಜನ ಈಗಲೇ ತೀರ್ಮಾನಕ್ಕೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ದರ್ಶನ್ ಅಣ್ಣ ಕನಸಿನಲ್ಲಿಯೂ ಯಾರಿಗೂ ಕೇಡು ಬಯಸಲ್ಲ, ತೊಂದರೆ ಕೊಡುವವರಲ್ಲ ಎಂದು ಹೇಳಿದ್ದಾರೆ. ದರ್ಶನ್ ಅವರದ್ದು ಉದಾರತೆ, ಸಹೃದಯ ಸ್ವಭಾವದ ವ್ಯಕ್ತಿತ್ವ ಎಂದಿರುವ ನಾಗಶೌರ್ಯ, ಇತರರಿಗೆ ಸಹಾಯ ಮಾಡುವ ಗುಣ ದರ್ಶನ್ಗೆ ಇದೆ ಅಂದಿದ್ದಾರೆ. ಅವರು ಯಾವಾಗಲೂ ಅಗತ್ಯವಿರುವವರ ಸಹಾಯಕ್ಕೆ ಧಾವಿಸುತ್ತಾರೆ. ಅವರು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ’ ಎಂದು ಕೂಡ ಹೇಳಿರುವ ನಾಗ ಶೌರ್ಯ, ಕನಸು ಮನಸಿನಲ್ಲಿ ಕೂಡ ಈ ಸುದ್ದಿಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತೆ ಎಂದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನಟ ನಾಗಶೌರ್ಯ, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದಿರುವ ನಾಗ ಶೌರ್ಯ, ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ . ಅಚ್ಚರಿ ಅಂದರೆ ನಾಗಶೌರ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇ ತಡ ಈ ನಟನ ವಿರುದ್ದವೂ ಕೆಲವರು ಕೆಂಡಕಾರುತ್ತಿದ್ದಾರೆ. ಇವರ ಹೇಳಿಕೆಯನ್ನ ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗ ಮಾತನಾಡುವ ಅವಶ್ಯಕತೆ ಇರಲಿಲ್ಲ ಅಂತ ಕಮೆಂಟ್ ಮಾಡುತ್ತಿದ್ದಾರೆ.