ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಪರಿಷತ್ ಸಭೆ ನಡೆಸಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಸಭೆಯಲ್ಲಿ 2024-25 ನೇ ಸಾಲಿನ ಕ್ರಿಯಾ ಯೋಜನೆ ಮಂಜೂರು ಮಾಡಲಾಗಿದೆ. ಒಟ್ಟು 39,120 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದ್ದು ಪರಿಶಿಷ್ಟ ಜಾತಿಗೆ 27,676 ಕೋಟಿ ರೂಪಾಯಿ ಅನುದಾನ, ಪರಿಶಿಷ್ಟ ಪಂಗಡಕ್ಕೆ 11,447 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಳೆದ ವರ್ಷಕ್ಕಿಂತ 3900 ಕೋಟಿ ರುಪಾಯಿ ಹೆಚ್ಚಳವಾಗಿದೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ತಡೆ ಹಿಡಿಯಲಾಗಿದ್ದ ಅನುದಾನ ಮಂಜೂರಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ನಾವು ಖರ್ಚು ಮಾಡಬೇಕಿದೆ, ಇದರ ಜೊತೆಗೆ ಗ್ಯಾರಂಟಿ ಯೋಜನೆಗಳು ಈ ವರ್ಗದ ಜನರಿಗೆ ಸಿಗುತ್ತಿದೆ. ದೇಶದಲ್ಲಿ ಇದನ್ನು ಎಲ್ಲಿಯೂ ಮಾಡಿಲ್ಲ, ನರೇಂದ್ರ ಮೋದಿಯವರಿಗೆ ನಾವು ಒತ್ತಾಯ ಮಾಡಿದ್ರು ಮಾಡಿಲ್ಲ, ಪ್ರತಿ ಇಲಾಖೆಗೆ ಎಷ್ಟು ಹಣ ಅಂತ ನಿಗದಿ ಮಾಡಿದ್ದೇವೆ. ಎಲ್ಲ ಇಲಾಖೆಗೂ ದೊಡ್ಡ ಮೊತ್ತದ ಹಣವನ್ನು ನೀಡುತ್ತಿದ್ದೇವೆ. ಶಾಸಕರ ಸಲಹೆ, ಅಭಿಪ್ರಾಯ ಪಡೆದೇ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಕೇಳಿದ್ದು ಮೌಲ್ಯಮಾಪನವನ್ನು ಮಾಡಿದ್ದಾರೆ, ಅದರಿಂದ 65% ಉಪಯೋಗ ಆಗಿದೆ. ಮನೆಮನೆಗೆ ಸರ್ವೆ ಮಾಡಿ, ಅಭಿವೃದ್ಧಿ ಏನೇನಾಗಿದೆ ಅನ್ನೋದನ್ನ ಪರಿಶಿಲಿಸುತ್ತೇವೆ. ನರೇಂದ್ರಸ್ವಾಮಿ ಲ್ಯಾಪ್ಟಾಪ್ ಕೊಡಲು ಕೇಳಿದ್ದು, ಪಿಜಿ ವಿದ್ಯಾರ್ಥಿಗಳಿಗೆ ಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ದೆಹಲಿಯಲ್ಲಿ ಐಎಎಸ್, ಐಆರ್ಎಸ್ ಓದುವ 70 ವಿದ್ಯಾರ್ಥಿಗಳು ಕೋಚಿಂಗ್ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ತಿಂಗಳಿಗೆ 10 ಸಾವಿರ ಕೊಡುತ್ತಿದ್ದೇವೆ. ಅದನ್ನು 15 ಸಾವಿರಕ್ಕೆ ಹೆಚ್ಚಳಮಾಡಿ ಆದೇಶ ಮಾಡಿದ್ದೇನೆ. ಅಲ್ಲಿ ಒಂದು ಹಾಸ್ಟೆಲ್ ಕಟ್ಟಿಕೊಡಬೇಕು, ಕ್ವಾಲಿಟಿ ಲೈಬ್ರೆರಿ ಮಾಡಿಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಅದಕ್ಕೆ ಸೂಕ್ತ ಜಾಗ ನೋಡಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಈ ವರ್ಷದಿಂದ ಹೋಬಳಿಗೊಂದು ರೆಸಿಡೆನ್ಸಿಯಲ್ ಶಾಲೆ ತೆಗೆಯುವ ನಿರ್ಧಾರ ಮಾಡಿದ್ದೇವೆ. ಹೋಬಳಿಯಲ್ಲಿರುವ ಶಾಲೆಗಳಲ್ಲಿ 75% ಪ್ರವೇಶ ನೀಡುತ್ತಿದ್ದೇವೆ. ಪ್ರತಿ ವರ್ಷ ಕೊಟ್ಟ ಹಣ ಆ ವರ್ಷವೇ ಖರ್ಚಾಗಬೇಕು. ಯಾರಾದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಕಳೆದ ಬಾರಿ 95 ಕೋಟಿ ಹಣ ಖರ್ಚಾಗಿಲ್ಲ. ಮೂರು ತಿಂಗಳಿಗೊಮ್ಮೆ ಪ್ರಗತಿ ಸಭೆ ಮಾಡುತ್ತೇವೆ. ಈಗಾಗಲೇ ಕೆಲವು ಯೋಜನೆಗಳಿಗೆ ಹಣ ಖರ್ಚಾಗಿದೆ ಮುಂದಿನ ಮಾರ್ಚ್ ಒಳಗೆ ಈ ಅನುದಾನ ಖರ್ಚಾಗುತ್ತದೆ ಎಂದರು.
ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವ ಬಿಜೆಪಿ, ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಈ ಗ್ಯಾರಂಟಿ ಯೋಜನೆ ಜಾರಿ ಮಾಡಿ ತೋರಿಸಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್, ಶಾಸಕ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್, ನರೇಂದ್ರಸ್ವಾಮಿ, ಕೃಷ್ಣಾನಾಯಕ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಸಂಸದರಾದ ಸುನಿಲ್ ಬೋಸ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದರು.