ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?

ಧೂಮಪಾನ ಆರೋಗ್ಯಕ್ಕೆ ಹಾನಿಕರ

ನಮ್ಮ ದೈನಂದಿನ ಜೀವನದಲ್ಲಿ ಚಹಾ ಒಂದು ಅವಿಭಾಜ್ಯ ಅಂಗ. ಕಚೇರಿಯ ವಿರಾಮವಿರಲಿ ಅಥವಾ ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ಈ ಚಹಾ ಬೇಕೇ ಬೆಕು. ಆದರೆ, ಈ ಚಹಾದ ಜೊತೆಗೆ ಸಿಗರೇಟ್ ಸೇದುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಈ ಸಂಯೋಜನೆಯು ದೇಹಕ್ಕೆ ಏಕಕಾಲದಲ್ಲಿ ಎರಡು ಪಟ್ಟು ಹಾನಿಯನ್ನುಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ನಾವು ಚಹಾವನ್ನು ಅತಿಯಾದ ಬಿಸಿಯಲ್ಲಿ ಕುಡಿಯುತ್ತೇವೆ. ತುಂಬಾ ಬಿಸಿಯಾದ ಚಹಾ ಕುಡಿಯುವಾಗ, ನಮ್ಮ ಗಂಟಲು ಮತ್ತು ಅನ್ನನಾಳದ (Esophagus) ಅತ್ಯಂತ ಸೂಕ್ಷ್ಮವಾದ ಒಳಪದರವು ಲಘುವಾಗಿ ಸುಟ್ಟು ಹೋಗುತ್ತದೆ ಅಥವಾ ಅತಿಯಾಗಿ ಸೆನ್ಸಿಟಿವ್ ಆಗುತ್ತದೆ.

ಈ ಸಂದರ್ಭದಲ್ಲಿ ಸಿಗರೇಟ್ ಸೇದಿದರೆ, ಅದರಲ್ಲಿರುವ ಟಾರ್, ನಿಕೋಟಿನ್ ಮತ್ತು ಇತರೆ ವಿಷಕಾರಿ ರಾಸಾಯನಿಕಗಳು ನೇರವಾಗಿ ಈ ಪೆಟ್ಟಾದ ಜೀವಕೋಶಗಳನ್ನು ಪ್ರವೇಶಿಸುತ್ತವೆ. ಇದು ಉರಿಯೂತ ಮತ್ತು ಜೀವಕೋಶಗಳ ಡಿಎನ್‌ಎ ಹಾನಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಗಂಭೀರವಾದ ಅನ್ನನಾಳದ ಕ್ಯಾನ್ಸರ್ ಆಗಿ ಮಾರ್ಪಡುವ ಸಾಧ್ಯತೆ ಇರುತ್ತದೆ.

ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವೆಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅದನ್ನು ಬಿಸಿ ಪಾನೀಯಗಳೊಂದಿಗೆ (ಚಹಾ ಅಥವಾ ಕಾಫಿ) ಸಂಯೋಜಿಸಿದಾಗ ಆ ಅಪಾಯವು ಐದು ಪಟ್ಟು ಹೆಚ್ಚಾಗುತ್ತದೆ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಈ ಅಭ್ಯಾಸವು ಕೇವಲ ಗಂಟಲಿಗೆ ಸೀಮಿತವಾಗದೆ, ಅಸಿಡಿಟಿ ಮತ್ತು ಜೀರ್ಣಕ್ರಿಯೆಯಲ್ಲಿ ಅಡಚಣೆ ಉಂಟುಮಾಡುತ್ತದೆ. ರಕ್ತದೊತ್ತಡ ಹೆಚ್ಚಿಸಿ ಹೃದಯಾಘಾತದ ಅಪಾಯವನ್ನು ತರುವ ಜೊತೆಗೆ ಶ್ವಾಸಕೋಶದ ಸಾಮರ್ಥ್ಯವನ್ನು ಕುಗ್ಗಿಸಿ ಉಸಿರಾಟದ ತೊಂದರೆ ಎದುರಾಗುತ್ತದೆ.

ಈ ಅಭ್ಯಾಸದಿಂದ ಹೊರಬರುವುದು ಹೇಗೆ ?

ಒಂದು ವೇಳೆ ನಿಮಗೆ ಧೂಮಪಾನ ಬಿಡಲು ಕಷ್ಟವಾದರೆ, ಮೊದಲು ಚಹಾ ಮತ್ತು ಸಿಗರೇಟ್ ಎರಡನ್ನೂ ಒಟ್ಟಿಗೆ ಸೇವಿಸುವುದನ್ನು ನಿಲ್ಲಿಸಿ. ಚಹಾ ಕುಡಿದ ಕನಿಷ್ಠ 15-20 ನಿಮಿಷಗಳ ನಂತರವಷ್ಟೇ ಧೂಮಪಾನ ಮಾಡಿ. ಅತಿಯಾದ ಬಿಸಿಯಾದ ಚಹಾ ಕುಡಿಯುವ ಅಭ್ಯಾಸವನ್ನು ಬಿಡಿ. ಸ್ವಲ್ಪ ತಣ್ಣಗಾದ ನಂತರ ಸೇವಿಸುವುದು ಉತ್ತಮ. ವ್ಯಾಯಾಮ, ಆರೋಗ್ಯಕರ ಆಹಾರ ಕ್ರಮ ಮತ್ತು ಅಗತ್ಯವಿದ್ದರೆ ತಜ್ಞರ ಸಲಹೆಯನ್ನು ಪಡೆದು ನಿಕೋಟಿನ್ ಚಟದಿಂದ ಸಂಪೂರ್ಣವಾಗಿ ಹೊರಬನ್ನಿ. ಬಿಸಿ ಚಹಾ ಮತ್ತು ಸಿಗರೇಟ್ ನೀಡುವ ಆ ಕ್ಷಣಿಕ ಉಲ್ಲಾಸವು ನಿಮ್ಮ ಜೀವನವನ್ನೇ ಬಲಿ ಪಡೆಯುವ ಮುನ್ನ ಎಚ್ಚೆತ್ತುಕೊಳ್ಳಿ.

Exit mobile version