30 ದಾಟಿದ ನಂತರ ದಿಡೀರನೆ ತೂಕ ಹೆಚ್ಚಾಗುತ್ತದೆ, ಇದಕ್ಕೆ ನಿಖರ ಕಾರಣ ಇಲ್ಲಿದೆ ನೋಡಿ

Weight gain and fatigue after 30 vitamin deficiency remedies

ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕುಗಟ್ಟುವುದು, ಹೊಟ್ಟೆ ಉಬ್ಬರ ಅಥವಾ ದೇಹದ ತೂಕ ಹೆಚ್ಚಾಗುವುದು ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ, ಇತ್ತೀಚಿನ ವೈದ್ಯಕೀಯ ಸಂಶೋಧನೆಗಳ ಪ್ರಕಾರ, 30 ವರ್ಷ ದಾಟಿದವರಲ್ಲಿ ಕಾಣಿಸಿಕೊಳ್ಳುವ ಅತಿಯಾದ ಆಯಾಸ, ದೇಹದ ಊತ ಮತ್ತು ತೂಕ ಹೆಚ್ಚಳಕ್ಕೆ ಕೇವಲ ವಯಸ್ಸು ಕಾರಣವಲ್ಲ, ಬದಲಾಗಿ ದೇಹದಲ್ಲಿನ ವಿಟಮಿನ್ ಡಿ (Vitamin D) ಮತ್ತು ವಿಟಮಿನ್ ಬಿ12 (Vitamin B12) ಕೊರತೆಯೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅನೇಕರು ಈ ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ದೇಹದ ಚಯಾಪಚಯ ಕ್ರಿಯೆ (Metabolism) ಸರಿಯಾಗಿ ನಡೆಯಲು ವಿಟಮಿನ್‌ಗಳು ಅತ್ಯಗತ್ಯ. ವಿಟಮಿನ್ ಡಿ ಮತ್ತು ಬಿ12 ಮಟ್ಟ ಕುಸಿದಾಗ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರಿಂದಾಗಿ ದೇಹವು ಕ್ಯಾಲೊರಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಬದಲಿಗೆ ಕೊಬ್ಬಿನ ರೂಪದಲ್ಲಿ ಸಂಗ್ರಹಿಸಲು ಶುರು ಮಾಡುತ್ತದೆ. ಈ ಕೊಬ್ಬು ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿ ಬೆಲ್ಲಿ ಫ್ಯಾಟ್ ಹೆಚ್ಚಾಗಲು ಕಾರಣವಾಗುತ್ತದೆ. ಅಲ್ಲದೆ, ನೀರಿನ ಶೇಖರಣೆಯಿಂದಾಗಿ (Water Retention) ದೇಹದಲ್ಲಿ ಊತ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ವಿಟಮಿನ್ ಬಿ12 ಕೊರತೆಯ ಲಕ್ಷಣಗಳು

ಬಿ12 ನರಗಳ ಆರೋಗ್ಯ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅತಿ ಮುಖ್ಯ. ಇದರ ಕೊರತೆಯಾದಾಗ, ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ನಿರಂತರ ಆಯಾಸ ಕಾಡುತ್ತದೆ ಇದರೊಟ್ಟಿಗೆ ಸ್ನಾಯುಗಳ ದೌರ್ಬಲ್ಯ ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತದೆ ಮತ್ತು ಕಾರ್ಬೋಹೈಡ್ರೇಟ್‌ಗಳು ಸರಿಯಾಗಿ ಜೀರ್ಣವಾಗದೆ ತೂಕ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ.

ವಿಟಮಿನ್ ಡಿ ಕೊರತೆಯ ಪ್ರಭಾವ

ವಿಟಮಿನ್ ಡಿ ಕೇವಲ ಮೂಳೆಗಳಿಗೆ ಮಾತ್ರವಲ್ಲ, ಹಾರ್ಮೋನುಗಳ ಸಮತೋಲನಕ್ಕೂ ಬೇಕು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಿರುವುದು ಇದರ ಕೊರತೆಗೆ ಮುಖ್ಯ ಕಾರಣ. ಇದು ಚಯಾಪಚಯವನ್ನು ಮಂದಗತಿಗೊಳಿಸಿ, ದೇಹದಲ್ಲಿ ಶಕ್ತಿ ಇಲ್ಲದಂತೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿಯು ಸದಾ ಆಲಸ್ಯದಿಂದ ಇರುತ್ತಾನೆ, ಇದು ಪರೋಕ್ಷವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಪರಿಹಾರ ಮತ್ತು ಮುನ್ನೆಚ್ಚರಿಕೆಗಳು

ಈ ಸಮಸ್ಯೆಗಳನ್ನು ಹೋಗಲಾಡಿಸಲು ವೈದ್ಯರು ಕೆಲವು ಸರಳ ಮಾರ್ಗಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ,

  1. ಪ್ರತಿದಿನ ಕನಿಷ್ಠ 15-20 ನಿಮಿಷಗಳ ಕಾಲ ಬೆಳಗಿನ ಬಿಸಿಲಿನಲ್ಲಿರಿ.

  2. ಹಾಲು, ಮೊಟ್ಟೆ, ಮೀನು ಮತ್ತು ಪನೀರ್‌ನಂತಹ ಬಿ12 ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

  3. ನಿಯಮಿತ ವ್ಯಾಯಾಮ ಮಾಡಿ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

  4. ಒಂದು ವೇಳೆ ಲಕ್ಷಣಗಳು ತೀವ್ರವಾಗಿದ್ದರೆ, ರಕ್ತ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದು ಉತ್ತಮ.

Exit mobile version