ಬೆಂಗಳೂರು: ಅತಿಯಾದ ಉಪ್ಪಿನ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಆರೋಗ್ಯ ಇಲಾಖೆ, ಸಾರ್ವಜನಿಕರು ಸೇರಿದಂತೆ ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸ್ಟ್ರೀಟ್‌ಫುಡ್ ಮಾರಾಟಗಾರರು ಹಾಗೂ ಆಹಾರ ತಯಾರಿಕಾ ಸಂಸ್ಥೆಗಳಿಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವೂ ಹೆಚ್ಚಬಹುದು. ಹೀಗಾಗಿ ಪ್ರತಿಯೊಬ್ಬರೂ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ದೈನಂದಿನ ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದರ ಜೊತೆಗೆ ಸಂಸ್ಕರಿಸಿದ ಮತ್ತು ಪ್ಯಾಕೇಜ್ಡ್ ಆಹಾರಗಳ ಸೇವನೆಯನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಏನು ಸಲಹೆ?
ಅಡುಗೆ ಮಾಡುವಾಗ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲೂ ಹೆಚ್ಚು ಉಪ್ಪು ಬಳಸದಂತೆ ಎಚ್ಚರಿಕೆ ವಹಿಸಬೇಕು. ಊಟ ಮಾಡುವ ಮೊದಲು ಆಹಾರದ ರುಚಿ ನೋಡದೆ ಹೆಚ್ಚುವರಿಯಾಗಿ ಉಪ್ಪು ಸೇರಿಸುವ ಅಭ್ಯಾಸವನ್ನು ಬಿಡಬೇಕು.
ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್‌ಸ್ಟಂಟ್ ಹಾಗೂ ರೆಡಿ-ಟು-ಈಟ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಪ್ಯಾಕೇಜ್ಡ್ ಆಹಾರ ಖರೀದಿಸುವಾಗ ಅದರ ಲೇಬಲ್‌ನಲ್ಲಿರುವ ಉಪ್ಪು ಅಥವಾ ಸೋಡಿಯಂ ಪ್ರಮಾಣವನ್ನು ಪರಿಶೀಲಿಸಿ ಕಡಿಮೆ ಸೋಡಿಯಂ ಇರುವ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ತಾಜಾ ಹಾಗೂ ಕಡಿಮೆ ಸಂಸ್ಕರಿಸಿದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡಲಾಗಿದೆ.
ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಡಿಮೆ ಉಪ್ಪಿನ ಆಹಾರ ಸೇವಿಸುವ ಅಭ್ಯಾಸ ಬೆಳೆಸಬೇಕು. ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆ ಇರುವವರು ಉಪ್ಪಿನ ಪ್ರಮಾಣ ಕಡಿಮೆ ಮಾಡುವ ಕುರಿತು ವೈದ್ಯರ ಸಲಹೆ ಪಡೆಯಬೇಕು. Low-sodium ಉಪ್ಪಿನ ಬದಲಿ ಬಳಸುವವರು ಆಹಾರ ಸುರಕ್ಷತಾ ನಿಯಮಗಳು ಹಾಗೂ ವೈದ್ಯಕೀಯ ಸಲಹೆ ಪಾಲಿಸಬೇಕು. ವಿಶೇಷವಾಗಿ ಕಿಡ್ನಿ ಕಾಯಿಲೆ ಇರುವವರು ವೈದ್ಯರ ಸಲಹೆಯಿಲ್ಲದೆ ಇಂತಹ ಉಪ್ಪಿನ ಬದಲಿಗಳನ್ನು ಬಳಸಬಾರದು.
ಹೋಟೆಲ್-ರೆಸ್ಟೋರೆಂಟ್‌ಗಳಿಗೆ ಸೂಚನೆ
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅಡುಗೆಯಲ್ಲಿ ಉಪ್ಪಿನ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪದ್ಧತಿ ಅಳವಡಿಸಿಕೊಳ್ಳಬೇಕು. ಅಡುಗೆ ಸಿಬ್ಬಂದಿಗೆ ಕಡಿಮೆ ಉಪ್ಪಿನ ಅಡುಗೆ ಕುರಿತು ತರಬೇತಿ ನೀಡಬೇಕು. ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸುವ ಜೊತೆಗೆ ಕಡಿಮೆ ಉಪ್ಪಿನ ಆಹಾರ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಬೇಕು.
ಸ್ಟ್ರೀಟ್‌ಫುಡ್ ಮಾರಾಟಗಾರರು ಕೂಡ ತಯಾರಿಕೆ ಮತ್ತು ಬಡಿಸುವ ಸಂದರ್ಭದಲ್ಲಿ ಅನಗತ್ಯವಾಗಿ ಉಪ್ಪು ಸೇರಿಸುವುದನ್ನು ತಪ್ಪಿಸಬೇಕು.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಹಾಗೂ ಕಡಿಮೆ ಉಪ್ಪಿನ ಸೇವನೆಯ ಕುರಿತು ಅರಿವು ಮೂಡಿಸಬೇಕು. ಶಾಲಾ ಊಟ ಮತ್ತು ಸ್ನ್ಯಾಕ್ಸ್‌ನಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು. ಅಡುಗೆ ಸಿಬ್ಬಂದಿಗೆ ತರಬೇತಿ ನೀಡಿ, ಪೋಷಕರಿಗೂ ಮನೆಯಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳೆಸುವಂತೆ ಪ್ರೇರೇಪಿಸಬೇಕು.
ಇದರ ಜೊತೆಗೆ ಆಹಾರ ತಯಾರಿಕಾ ಮತ್ತು ಪ್ಯಾಕೇಜ್ಡ್ ಫುಡ್ ಸಂಸ್ಥೆಗಳು ಉತ್ಪನ್ನಗಳಲ್ಲಿ ಉಪ್ಪು ಅಥವಾ ಸೋಡಿಯಂ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು. ಪೌಷ್ಟಿಕಾಂಶದ ಮಾಹಿತಿಯನ್ನು ಲೇಬಲ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿ, ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
