ಅಮೆರಿಕ ಸರ್ಕಾರವೇ ಬಂದ್..! ನೌಕರರಿಗೆ ಸಂಬಳವೂ ಇಲ್ಲ..! ವಿಶ್ವದ ದೊಡ್ಡಣ್ಣನಿಗೆ ಇದೆಂಥಾ ದುರ್ಗತಿ..?

Govt

ಅಮೆರಿಕಾ ಸಂಯುಕ್ತ ಸಂಸ್ಥಾನದ (USA) ಫೆಡರಲ್ ಸರ್ಕಾರದ ಎಲ್ಲಾ ಕಾರ್ಯಾಚರಣೆಗಳೂ ಏಕಾಏಕಿ ಸ್ಥಗಿತವಾಗುವ ಆತಂಕ ಎದುರಾಗಿದೆ. ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ನಡುವೆ ನಡೆಯುತ್ತಿರುವ ಜಂಗೀಕುಸ್ತಿ, ಇಡೀ ಸರ್ಕಾರವನ್ನೇ ಸ್ಥಬ್ಧ ಮಾಡುವ ಹಂತ ತಲುಪಿದೆ.

ಅಸಲಿಗೆ ಆಗಿರೋದಾದ್ರೂ ಏನು..?

ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರವು ಯಾವುದೇ ಉದ್ದೇಶಕ್ಕೆ ಬೊಕ್ಕಸದ ಹಣ ಬಳಕೆ ಮಾಡಿಕೊಳ್ಳಬೇಕೆಂದರೆ, ಅಲ್ಲಿನ ಸಂಸತ್ ಅನುಮೋದನೆ ಬೇಕು. ಇದೀಗ ಅಮೆರಿಕದಲ್ಲಿ ಈ ವಿಚಾರವೇ ಬಿಕ್ಕಟ್ಟು ತಂದಿಟ್ಟಿದೆ. ಅಮೆರಿಕ ಕಾಂಗ್ರೆಸ್ (ಅಲ್ಲಿನ ಸಂಸತ್) ಅನುಮೋದನೆ ಇಲ್ಲದೆ ಸರ್ಕಾರ ಹಣ ಬಳಕೆ ಮಾಡುವಂತಿಲ್ಲ. ಇದೀಗ ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯ ನಿರ್ವಹಣೆಗೆ ಹಣಕಾಸಿನ ಅಗತ್ಯತೆ ಇದೆ. ಇದಕ್ಕಾಗಿ ಸರ್ಕಾರ ಹೊಸ ಹಣಕಾಸು ವಿನಿಯೋಗ ವಿಧೇಯಕವನ್ನೂ ಸಿದ್ದಪಡಿಸಿದೆ. ಆದರೆ, ಈ ವಿಧೇಯಕಕ್ಕೆ ವಿಪಕ್ಷ ಡೆಮಾಕ್ರೆಟಿಕ್ ಅಡ್ಡಗಾಲು ಹಾಕಿದೆ..!

ಅತಂತ್ರ ಸ್ಥಿತಿಯಲ್ಲಿ ಧನ ವಿನಿಯೋಗ ವಿಧೇಯಕ..!

ಭಾರತದ ಮಟ್ಟಿಗೆ ಹೇಳಬೇಕೆಂದರೆ ನಮ್ಮ ಸಂಸತ್ ಹಾಗೂ ವಿವಿಧ ರಾಜ್ಯಗಳ ವಿಧಾನಮಂಡಲಗಳಲ್ಲಿ ಧನ ವಿನಿಯೋಗ ವಿಧೇಯಕ ಮಂಡನೆಯಾಗುತ್ತದೆ. ಈ ವಿಧೇಯಕ ಪಾಸ್ ಆದ ಬಳಿಕ ಸರ್ಕಾರದ ವಿವಿಧ ಇಲಾಖೆಗಳು ಹಣ ವೆಚ್ಚ ಮಾಡಬಹುದು, ಸಿಬ್ಬಂದಿಗೆ ಸಂಬಳ ನೀಡಬಹುದು. ಇದೇ ಪದ್ದತಿ ಅಮೆರಿಕದಲ್ಲೂ ಇದೆ. ಅಮೆರಿಕಾದ ಸಂವಿಧಾನದ ಪ್ರಕಾರ ಸರ್ಕಾರಕ್ಕೆ ಹಣ ಖರ್ಚು ಮಾಡಲು ಅಧಿಕಾರ ನೀಡುವುದು ಅಲ್ಲಿನ ಕಾಂಗ್ರೆಸ್.. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ ಎಂಬ ಎರಡು ಸದನಗಳು ಸರ್ಕಾರದ ವಿವಿಧ ಖಾತೆಗಳಿಗೆ ಹಣ ಬಿಡುಗಡೆ ಮಾಡುವ ಹಣಕಾಸು ಒಪ್ಪಂದಗಳಿಗೆ ಅನುಮೋದನೆ ನೀಡಬೇಕು. ಆದರೆ, ರಿಪಬ್ಲಿಕನ್ & ಡೆಮಾಕ್ರೆಟಿಕ್ ಪಕ್ಷಗಳ ನಡುವಣ ರಾಜಕೀಯ ಮತ್ಸರದ  ಹಿನ್ನೆಲೆಯಲ್ಲಿ ಈ ಒಪ್ಪಂದಗಳು ಸಮಯಕ್ಕೆ ಜಾರಿಗೆ ಬರುತ್ತಿಲ್ಲ. ಹೀಗಾಗಿ ಸರ್ಕಾರದ ಬಳಿ ಖರ್ಚು ಮಾಡಲು ಹಣವಿಲ್ಲದಂತಾಗಿದೆ. ಅಮೆರಿಕದಲ್ಲಿ ಈ ಸನ್ನಿವೇಶವನ್ನ ‘ಗವರ್ನಮೆಂಟ್ ಶಟ್ ಡೌನ್’ ಎನ್ನುತ್ತಾರೆ..!

ತಾತ್ಕಾಲಿಕ ಒಪ್ಪಂದಕ್ಕೂ ಸೊಪ್ಪು ಹಾಕ್ತಿಲ್ಲ ರಾಜಕೀಯ ನಾಯಕರು..!

ಪೂರ್ಣ ಪ್ರಮಾಣದ ಧನ ವಿನಿಯೋಗ ವಿಧೇಯಕವನ್ನ ಅಂಗೀಕಾರ ಮಾಡೋದಿರಲಿ, ತಾತ್ಕಾಲಿಕವಾಗಿ ರೂಪಿಸಲಾಗಿರುವ ಹಣಕಾಸು ಒಪ್ಪಂದಕ್ಕೂ ಇಲ್ಲಿನ ರಾಜಕಾರಣಿಗಳು ಸೊಪ್ಪು ಹಾಕ್ತಿಲ್ಲ. ಅಮೆರಿಕದಲ್ಲಿ ಈ ತಾತ್ಕಾಲಿಕ ಒಪ್ಪಂದವನ್ನ ಸ್ಟಾಪ್-ಗ್ಯಾಪ್ ಫಂಡಿಂಗ್ ಬಿಲ್ ಎಂದು ಕರೆಯಲಾಗುತ್ತೆ. ಈ ಒಪ್ಪಂದಕ್ಕೆ ಸೆನೆಟ್‌ನಲ್ಲಿ ಅಗತ್ಯ ಬಹುಮತದ ಒಪ್ಪಿಗೆಯೇ ಸಿಕ್ಕಿಲ್ಲ. ಈ ಒಪ್ಪಂದದ ವಿಚಾರವಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಡುವೆ ಹಲವು ಭಿನ್ನ ವಾದಗಳಿವೆ. ಪ್ರಮುಖವಾಗಿ ಆರೋಗ್ಯ ಕ್ಷೇತ್ರದ ಸಬ್ಸಿಡಿ, ಇತರ ಸಾಮಾಜಿಕ ಕಾರ್ಯಕ್ರಮಗಳ ಖರ್ಚು ಮತ್ತು ಅಫೋರ್ಡಬಲ್ ಕೇರ್ ಆಕ್ಟ್ (ಆರೋಗ್ಯ ವಿಮಾ ಯೋಜನೆ)ಯಂಥಾ ವಿಷಯಗಳ ಸಂಬಂಧ ತೀವ್ರ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ, ಹಣಕಾಸು ಒಪ್ಪಂದ ಮುರಿದು ಬಿದ್ದಿದ್ದು, ಸರ್ಕಾರಿ ಖರ್ಚು ಸಂಪೂರ್ಣವಾಗಿ ನಿಂತುಹೋಗಿದೆ..!

ಅಮೆರಿಕ ಸರ್ಕಾರದ ಮೇಲೆ ಎಫೆಕ್ಟ್ ಏನು..?

ಹಾಗೆ ನೋಡಿದ್ರೆ ಈ ರೀತಿಯ ಟ್ರೆಂಡ್ ಅಮೆರಿಕ ಇತಿಹಾಸದಲ್ಲಿ ಹೊಸದೇನಲ್ಲ. 1976 ರಿಂದ ಇದುವರೆಗೆ 21 ಬಾರಿ ಸರ್ಕಾರಿ  ಸೇವೆ ಬಂದ್ ಆಗಿದೆ. ತೀರಾ ಇತ್ತೀಚೆಗೆ 2018-19ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗಲೇ 35 ದಿನಗಳ ಕಾಲ ಸರ್ಕಾರ ಬಂದ್ ಆಗಿತ್ತು.

ಅಮೆರಿಕದ ಈ ಸನ್ನಿವೇಶ ಭಾರತ ಎದುರಾಗಲು ಸಾಧ್ಯವೇ ಇಲ್ಲ..! ಏಕೆಂದರೆ, ಸರ್ಕಾರಿ ಖರ್ಚುಗಳಿಗೆ ಸಂಸತ್ ಅನುಮೋದನೆಯೇನೋ ಅತ್ಯಗತ್ಯ. ಒಂದು ವೇಳೆ ಸಂಸತ್ ಅಧಿವೇಶನ ನಡೆಯದೇ ಇದ್ದರೆ ‘ಅಪ್ರೋಪ್ರಿಯೇಷನ್ ಬಿಲ್’ಗೆ ಮೊದಲೇ ಅನುಮೋದನೆ ಪಡೆಯಲಾಗಿರುತ್ತೆ. ಕೆಲವೊಮ್ಮೆ ‘ವೋಟ್ ಆನ್ ಅಕೌಂಟ್’ ಮೂಲಕ ತಾತ್ಕಾಲಿಕ ಹಣಕಾಸು ಒಪ್ಪಂದಕ್ಕೂ ಬರಲಾಗುತ್ತದೆ. ಈ ಕಾರಣದಿಂದಾಗಿ, ಅಮೆರಿಕಾದಂಥ ಸಂಪೂರ್ಣ ಸರ್ಕಾರಿ ಬಂದ್ ಪರಿಸ್ಥಿತಿ ಭಾರತದಲ್ಲಿ ಸೃಷ್ಟಿಯಾಗುವ ಸಾಧ್ಯತೆ ಬಹಳ ಕಡಿಮೆ.

Exit mobile version