ಇರಾನ್ ಮೇಲಿನ ಅಮೆರಿಕ ದಾಳಿಗೆ ಅಸಲಿ ಕಾರಣ ಬಿಚ್ಚಿಟ್ಟ ರಷ್ಯಾ ವಿದೇಶಾಂಗ ಸಚಿವ

Untitled design 2026 03 31T162059.702

ಪಶ್ಚಿಮ ಏಷ್ಯಾದಲ್ಲಿ ಸದ್ಯ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಯ ಹಿಂದೆ ಅಮೆರಿಕದ ತೈಲ ರಾಜಕೀಯ ಅಡಗಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ಗಂಭೀರ ಆರೋಪ ಮಾಡಿದ್ದಾರೆ. ಅಣ್ವಸ್ತ್ರ ಮತ್ತು ಕ್ಷಿಪಣಿಗಳ ನೆಪವೊಡ್ಡಿ ಇರಾನ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದ ಅಸಲಿ ಉದ್ದೇಶ ಆ ದೇಶದ ತೈಲ ಭಂಡಾರವನ್ನು ಲೂಟಿ ಮಾಡುವುದೇ ಆಗಿದೆ ಎಂದು ಲಾವ್ರೋವ್ ಚಾಟಿ ಬೀಸಿದ್ದಾರೆ.

ಹಿಂದೆ ವೆನೆಜುವೆಲಾದಲ್ಲಿ ನಡೆದ ಆಡಳಿತ ಬದಲಾವಣೆಯ ಪ್ರಯತ್ನಗಳನ್ನು ನೆನಪಿಸಿದ ಲಾವ್ರೋವ್, ಈಗ ಇರಾನ್ ವಿಷಯದಲ್ಲೂ ಅಮೆರಿಕ ಅದೇ ಹಳೇ ಆಟವನ್ನು ಆಡುತ್ತಿದೆ ಎಂದಿದ್ದಾರೆ. ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪ ಹೊಂದಿರುವ ದೇಶಗಳಲ್ಲಿ ಒಂದು. ಅಲ್ಲಿನ ಸರ್ಕಾರವನ್ನು ಉರುಳಿಸಿ ತನ್ನ ಕೈಗೊಂಬೆ ಸರ್ಕಾರವನ್ನು ಕೂರಿಸಲು ಅಮೆರಿಕ ಪ್ರಯತ್ನಿಸಿತ್ತು. ಈಗ ಇರಾನ್‌ನ ತೈಲ ಸಂಪತ್ತನ್ನು ನಿಯಂತ್ರಿಸಲು ಅಲ್ಲಿನ ಆಡಳಿತವನ್ನು ಬದಲಾಯಿಸಲು (Regime Change) ಸಂಚು ರೂಪಿಸಲಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇರಾನ್ ಅಣ್ವಸ್ತ್ರ ತಯಾರಿಸುತ್ತಿದೆ ಅಥವಾ ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದು ಅಮೆರಿಕ ನೀಡುತ್ತಿರುವ ಕೇವಲ ನೆಪಗಳು ಮಾತ್ರ. ಅಸಲಿಗೆ ಅಮೆರಿಕಕ್ಕೆ ಇರಾನ್ ಜೊತೆ ಸಂಧಾನ ಮಾಡಿಕೊಳ್ಳುವುದು ಇಷ್ಟವೇ ಇಲ್ಲ. ಇರಾನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡರೆ ಆ ದೇಶದ ಮೇಲೆ ಹೇರಲಾದ ನಿರ್ಬಂಧಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದರೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ಬೇಕಿರುವುದು ಇರಾನ್‌ನ ಸಂಪೂರ್ಣ ನಾಶ ಮತ್ತು ಅಲ್ಲಿನ ತೈಲ ನಿಕ್ಷೇಪಗಳ ಮೇಲಿನ ಹಿಡಿತ ಎಂದು ರಷ್ಯಾ ವಿದೇಶಾಂಗ ಸಚಿವ ಗುಡುಗಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸದಂತೆ ನೋಡಿಕೊಳ್ಳುವುದೇ ಅಮೆರಿಕ ಮತ್ತು ಇಸ್ರೇಲ್‌ನ ಮುಖ್ಯ ಉದ್ದೇಶವಾಗಿದೆ. ಈ ಪ್ರದೇಶದಲ್ಲಿ ಯುದ್ಧದ ವಾತಾವರಣವಿದ್ದರೆ ಮಾತ್ರ ಇರಾನ್ ಮೇಲೆ ದಾಳಿ ಮಾಡಲು ಮತ್ತು ಅಲ್ಲಿನ ಆರ್ಥಿಕತೆಯನ್ನು ಕುಗ್ಗಿಸಲು ಸಾಧ್ಯ ಎಂಬುದು ಅವರ ಲೆಕ್ಕಾಚಾರ. ಅಂತರಾಷ್ಟ್ರೀಯ ಕಾನೂನುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಅಮೆರಿಕ, ಇತರೆ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಲಾವ್ರೋವ್ ಕಿಡಿಕಾರಿದ್ದಾರೆ.

ಒಟ್ಟಾರೆಯಾಗಿ, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ತನ್ನ ಏಕಸ್ವಾಮ್ಯವನ್ನು ಸಾಧಿಸಲು ಅಮೆರಿಕವು ಇರಾನ್ ಮತ್ತು ವೆನೆಜುವೆಲಾದಂತಹ ದೇಶಗಳನ್ನು ಬಲಿಪಶು ಮಾಡುತ್ತಿದೆ ಎಂಬ ರಷ್ಯಾದ ಈ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Exit mobile version