ಫಿಲಿಪೈನ್ಸ್‌ನಲ್ಲಿ ಭೀಕರ ದೋಣಿ ಅಗ್ನಿ ದುರಂತ; ಸಾವಿನ ಸಂಖ್ಯೆ 35ಕ್ಕೆ ಏರಿಕೆ!

ಛಾವಣಿ (5)

ಕೊರಾನ್, ಸೆಪ್ಟೆಂಬರ್ 11: ಫಿಲಿಪೈನ್ಸ್‌ನಲ್ಲಿ ಪ್ರಯಾಣಿಕರ ದೋಣಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಸುಟ್ಟು ಕರಕಲಾಗಿರುವ ಹಡಗಿನ ಒಳಭಾಗದಿಂದ ಶುಕ್ರವಾರ ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ದುರಂತದ ಬಳಿಕ ಇನ್ನೂ 54 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಬುಧವಾರ ರಾತ್ರಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಒಟ್ಟು 43 ಮಂದಿ ಬದುಕುಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ ಕಾವಲು ಪಡೆ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಹಡಗಿನ ಒಳಭಾಗ ಸಂಪೂರ್ಣವಾಗಿ ಸುಟ್ಟುಹೋಗಿರುವುದು ಕಂಡುಬಂದಿದೆ. ಬೂದಿ, ಸುಟ್ಟ ಲೋಹದ ಅವಶೇಷಗಳು ಹಾಗೂ ಸುಟ್ಟುಹೋದ ವಸ್ತುಗಳು ಹಡಗಿನೊಳಗೆ ಕಂಡುಬಂದಿವೆ.

ಗುರುವಾರ ಹಡಗಿನೊಳಗೆ ತೀವ್ರ ಶಾಖ ಮತ್ತು ದಟ್ಟ ಹೊಗೆ ಆವರಿಸಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಒಳಗೆ ಪ್ರವೇಶಿಸುವುದು ಕಷ್ಟವಾಗಿತ್ತು. ಹೀಗಾಗಿ ಹಡಗಿನೊಳಗೆ ಸಿಲುಕಿರಬಹುದಾದ ಪ್ರಯಾಣಿಕರಿಗಾಗಿ ನಡೆಸಿದ ಶೋಧ ಕಾರ್ಯ ನಿಧಾನಗೊಂಡಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.

ಮನಿಲಾದಿಂದ ಹೊರಟಿದ್ದ ದೋಣಿ ಪಲವಾನ್ ಪ್ರಾಂತ್ಯದ ಕೊರೊನ್ ಸಮೀಪದ ತುರ್ಡಾ ಗ್ರಾಮದಿಂದ ಸುಮಾರು 7.4 ಕಿಲೋಮೀಟರ್ ದೂರದಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಕರಾವಳಿ ಕಾವಲು ಪಡೆ ಹಾಗೂ ಸಂಬಂಧಿತ ಕಡಲ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಯಾಣಿಕರ ಮ್ಯಾನಿಫೆಸ್ಟ್ ಪ್ರಕಾರ, ದೋಣಿಯಲ್ಲಿ 117 ಪ್ರಯಾಣಿಕರು ಹಾಗೂ 17 ಸಿಬ್ಬಂದಿ ಸೇರಿದಂತೆ ಒಟ್ಟು 134 ಮಂದಿ ಇದ್ದರು. 53 ಮೀಟರ್ ಉದ್ದದ ಈ ಹಡಗು 306 ಪ್ರಯಾಣಿಕರು ಮತ್ತು 27 ಸಿಬ್ಬಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿತ್ತು. ಮ್ಯಾನಿಫೆಸ್ಟ್‌ನಲ್ಲಿ ಹೆಸರು ದಾಖಲಾಗಿದ್ದ ಇಬ್ಬರು ಪ್ರಯಾಣಿಕರು ತಾವು ದೋಣಿ ಹತ್ತಿರಲಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬದುಕುಳಿದವರಲ್ಲಿ ಇಬ್ಬರು ಚಿಲಿ ದೇಶದ ಪ್ರವಾಸಿಗರು ಇದ್ದಾರೆ ಎಂದು ಹಡಗಿನ ಮಾಲೀಕ ಸಂಸ್ಥೆಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡಿರುವ ಅವರು ಕೊರೊನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಡಗಿನಲ್ಲಿದ್ದ ಇತರ ಯಾವುದೇ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಘಟನೆಯ ಭೀಕರತೆಯನ್ನು ಬದುಕುಳಿದ ಪ್ರಯಾಣಿಕ ಅರ್ನುಲ್ಫೊ ನೊಕ್ಕಿ ವಿಲ್ಲಾನುಯೆವಾ ವಿವರಿಸಿದ್ದಾರೆ. ಬೆಂಕಿ ಅತ್ಯಂತ ವೇಗವಾಗಿ ಹರಡಿದ್ದು, ಬೆನ್ನು ಸುಟ್ಟ ಬಳಿಕ ತಾನು ಕಿಟಕಿಯಿಂದ ಸಮುದ್ರಕ್ಕೆ ಜಿಗಿಯಬೇಕಾಯಿತು ಎಂದು ಅವರು ಹೇಳಿದ್ದಾರೆ. ದೋಣಿಯೊಳಗೆ ಜನರು ಭಯಭೀತರಾಗಿ ಓಡಾಡುತ್ತಿದ್ದರಿಂದ ಲೈಫ್ ಜಾಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ನಾಪತ್ತೆಯಾಗಿರುವವರ ಕುಟುಂಬಸ್ಥರು ರಕ್ಷಣಾ ಕೇಂದ್ರಗಳಲ್ಲಿ ತಮ್ಮವರಿಗಾಗಿ ಆತಂಕದಿಂದ ಕಾಯುತ್ತಿದ್ದಾರೆ. ಕುಟುಂಬಗಳಿಗೆ ಮೃತದೇಹಗಳನ್ನು ಗುರುತಿಸುವುದೂ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಡಗು ಕಂಪನಿ ಪ್ರಯಾಣಿಕರು ಹಾಗೂ ಅವರ ಕುಟುಂಬಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದು, ನಾಪತ್ತೆಯಾದವರ ಪತ್ತೆ ಮತ್ತು ಬೆಂಕಿಯ ಕಾರಣದ ತನಿಖೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ.

ಪ್ರವಾಸಿ ತಾಣವಾದ ಕೊರೊನ್‌ಗೆ ತೆರಳಲು ಈ ಮಾರ್ಗದಲ್ಲಿ ದೋಣಿ ಸೇವೆ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಫಿಲಿಪೈನ್ಸ್‌ನಲ್ಲಿ ದೋಣಿ ಅಪಘಾತಗಳು ಅಪರೂಪವಲ್ಲ. 1987ರಲ್ಲಿ ‘ಡೋನಾ ಪಾಜ್’ ದೋಣಿ ಇಂಧನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಮುಳುಗಿದ ಘಟನೆಯಲ್ಲಿ 4,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Exit mobile version