ಓಸ್ಲೋ ಜುಲೈ 15: ನಾರ್ವೆಯ ಸ್ಟಾರ್ ಫುಟ್‌ಬಾಲರ್ ಎರ್ಲಿಂಗ್ ಹಾಲೆಂಡ್ ಅವರ ಜನಪ್ರಿಯತೆ ಈಗ ಮೈದಾನದ ಗಡಿಯನ್ನು ದಾಟಿ ಸಮಾಜದ ಮೇಲೆಯೂ ಪ್ರಭಾವ ಬೀರುತ್ತಿದೆ. ಎರ್ಲಿಂಗ್ ಹಾಲೆಂಡ್ ಈಗ ನಡೆಯುತ್ತಿರುವ FIFA ವಿಶ್ವಕಪ್‌ನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಮೈದಾನದಲ್ಲಿನ FIFA ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನದಿಂದ ಪ್ರೇರಿತರಾದ ಪೆರುವಿನ ಅನೇಕ ಪೋಷಕರು ತಮ್ಮ ನವಜಾತ ಮಕ್ಕಳಿಗೆ ಹಾಲೆಂಡ್ ಅವರ ಹೆಸರನ್ನೇ ಇಡುತ್ತಿದ್ದಾರೆ.
ಪೆರುವಿನ ರಾಷ್ಟ್ರೀಯ ಗುರುತಿನ ಮತ್ತು ನಾಗರಿಕ ಸ್ಥಿತಿ ನೋಂದಣಿ ಸಂಸ್ಥೆ (RENIEC) ನೀಡಿರುವ ಮಾಹಿತಿಯ ಪ್ರಕಾರ, ಇದುವರೆಗೆ 468 ಮಕ್ಕಳಿಗೆ ‘ಹಾಲೆಂಡ್’ ಎಂದು ಹೆಸರಿಡಲಾಗಿದೆ. ಇದರ ಜೊತೆಗೆ 91 ಶಿಶುಗಳಿಗೆ ‘ಎರ್ಲಿಂಗ್ ಹಾಲೆಂಡ್’ ಎಂಬ ಪೂರ್ಣ ಹೆಸರನ್ನೇ ನೋಂದಾಯಿಸಲಾಗಿದೆ.
ವಿಶ್ವಕಪ್‌ನಲ್ಲಿ ಹಾಲೆಂಡ್ ತಮ್ಮ ಅದ್ಭುತ ಗೋಲುಗಳ ಮೂಲಕ ಫುಟ್‌ಬಾಲ್ ಅಭಿಮಾನಿಗಳ ಮನಗೆಲ್ಲುವ ಮಾಲಕ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ತಮ್ಮ ಚೊಚ್ಚಲ ವಿಶ್ವಕಪ್ ಅಭಿಯಾನದಲ್ಲೇ ಏಳು ಗೋಲುಗಳನ್ನು ದಾಖಲಿಸಿ ಜನರ ಗಮನ ಸೆಳೆದಿದ್ದಾರೆ. 16ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಗಳಿಸಿದ ಎರಡು ಗೋಲುಗಳು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಅವರ ಅಮೋಘ ಪ್ರದರ್ಶನದ ನೆರವಿನಿಂದ 28 ವರ್ಷಗಳ ಬಳಿಕ ನಾರ್ವೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.
ಪಂದ್ಯಾವಳಿಯ ಆರಂಭದಿಂದಲೇ ಹಾಲೆಂಡ್ ಅವರ ಆಟ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿತು. ಅದರ ಪರಿಣಾಮವಾಗಿ ಪೆರುವಿನಲ್ಲಿ ಅವರ ಹೆಸರನ್ನು ಮಕ್ಕಳಿಗೆ ಇಡುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿರುವ RENIEC ವಕ್ತಾರ ಇವಾನ್ ಟೊರೆಸ್, “ಫುಟ್‌ಬಾಲ್ ತಾರೆಗಳು ಪೆರುವಿನ ಕುಟುಂಬಗಳಿಗೆ ಸದಾ ಸ್ಫೂರ್ತಿಯಾಗಿದ್ದಾರೆ. ನಾರ್ವೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಬಳಿಕ ಹಾಲೆಂಡ್ ಹೆಸರಿನ ನೋಂದಣಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
ಟೂರ್ನಿಯಿಂದ ನಾರ್ವೆ ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿರುವ ಹಾಲೆಂಡ್, ತಂಡದ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಭರವಸೆ ನೀಡಿದ್ದಾರೆ. ಮೈದಾನದಲ್ಲಿನ ಸಾಧನೆ ಮಾತ್ರವಲ್ಲದೆ, ವಿಶ್ವದಾದ್ಯಂತ ಅಭಿಮಾನಿಗಳ ಹೃದಯ ಗೆಲ್ಲುವ ಮೂಲಕ ಹಾಲೆಂಡ್ ಹೊಸ ಪೀಳಿಗೆಯ ಫುಟ್‌ಬಾಲ್ ಪ್ರೇರಣೆಯಾಗಿದ್ದಾರೆ.
