ಉ.ಕೊರಿಯಾದ ಉತ್ತರಾಧಿಕಾರಿ ಯಾರು..? ಪಟ್ಟಕ್ಕಾಗಿ ಕಿಮ್ ಪುತ್ರಿ & ಸಹೋದರಿ ನಡುವೆ ಪೈಪೋಟಿ

Untitled design 2026 02 17T082231.688

ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ ಉತ್ತರ ಕೊರಿಯಾದಲ್ಲಿ ಅಧಿಕಾರದ ಕಿಚ್ಚು ಹತ್ತಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ನಂತರ ಈ ಪರಮಾಣು ಪರಂಪರೆಯನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಈಗ ಇಬ್ಬರು ಪ್ರಬಲ ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದೆಡೆ ಕಿಮ್ ಅವರ 13 ವರ್ಷದ ಪುತ್ರಿ ಕಿಮ್ ಜು ಏ ಮಿಂಚುತ್ತಿದ್ದರೆ, ಮತ್ತೊಂದೆಡೆ ದಶಕಗಳಿಂದ ಅಧಿಕಾರದ ಹಿಡಿತ ಹೊಂದಿರುವ ಕಿಮ್ ಸಹೋದರಿ ಕಿಮ್ ಯೋ ಜಾಂಗ್ ಸದ್ದಿಲ್ಲದೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಕಿಮ್ ಜು ಏ: ಉದಯೋನ್ಮುಖ ನಾಯಕಿ

ನವೆಂಬರ್ 2022 ರಲ್ಲಿ ಮೊದಲ ಬಾರಿಗೆ ಕ್ಷಿಪಣಿ ಪರೀಕ್ಷೆಯ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜು ಏ, ಅಂದಿನಿಂದ ತಂದೆಯ ನೆರಳಿನಂತೆ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIS) ವರದಿಯ ಪ್ರಕಾರ, ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸುವ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ನಡೆದ ಚೀನಾ ಭೇಟಿ ಮತ್ತು ಮಿಲಿಟರಿ ಪರೇಡ್‌ಗಳಲ್ಲಿ ಆಕೆಗೆ ನೀಡಲಾಗುತ್ತಿರುವ ಪ್ರಾಮುಖ್ಯತೆ, ಆಕೆ ಕೇವಲ ಪ್ರೀತಿಯ ಮಗಳಲ್ಲ, ಬದಲಿಗೆ ಭವಿಷ್ಯದ ನಾಯಕಿ ಎಂಬುದನ್ನು ದೃಢಪಡಿಸುತ್ತಿದೆ. ಪುರುಷ ಪ್ರಾಬಲ್ಯದ ಈ ದೇಶದಲ್ಲಿ ಒಬ್ಬ ಹುಡುಗಿಯನ್ನು ನಾಯಕಿಯನ್ನಾಗಿ ಬಿಂಬಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಕಿಮದದ ಜು ಏಗೆ ಎದುರಾಗಿರುವುದು ದೇಶದ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದೇ ಕರೆಸಿಕೊಳ್ಳುವ ಕಿಮ್ ಯೋ ಜಾಂಗ್. ಕಿಮ್ ಜಾಂಗ್ ಉನ್ ಅವರ ಸಹೋದರಿಯಾಗಿರುವ ಇವರು, ಕಟುವಾದ ಮಾತುಗಳಿಗೆ ಮತ್ತು ರಾಜಕೀಯ ಚತುರತೆಗೆ ಹೆಸರಾದವರು. ದಕ್ಷಿಣ ಕೊರಿಯಾ ಮತ್ತು ಅಮೆರಿಕದ ವಿರುದ್ಧ ನಿರಂತರವಾಗಿ ಬೆಂಕಿಯುಗುಳುವ ಹೇಳಿಕೆಗಳನ್ನು ನೀಡುವ ಇವರು, ಈಗಾಗಲೇ ಸೇನೆ ಮತ್ತು ವರ್ಕರ್ಸ್ ಪಾರ್ಟಿಯ ಮೇಲೆ ಬಲವಾದ ಹಿಡಿತ ಹೊಂದಿದ್ದಾರೆ. ಒಂದು ವೇಳೆ ಕಿಮ್ ಜಾಂಗ್ ಉನ್ ಅವರಿಗೆ ಏನಾದರೂ ಸಂಭವಿಸಿದರೆ, ರಾಜಕೀಯವಾಗಿ ಪಕ್ವವಾಗಿರುವ ಕಿಮ್ ಯೋ ಜಾಂಗ್ ಅವರೇ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಿಮ್ ಕುಟುಂಬದ ಇತಿಹಾಸವು ರಕ್ತಸಿಕ್ತ ಅಧ್ಯಾಯಗಳಿಂದ ಕೂಡಿದೆ. ಅಧಿಕಾರಕ್ಕಾಗಿ ಕಿಮ್ ಜಾಂಗ್ ಉನ್ ಈ ಹಿಂದೆ ತನ್ನ ಸ್ವಂತ ಚಿಕ್ಕಪ್ಪ ಜಾಂಗ್ ಸಾಂಗ್ ಥೇಕ್ ಅವರನ್ನು ಹತ್ಯೆ ಮಾಡಿಸಿದ್ದರು. ಅಲ್ಲದೆ, ಮಲಸಹೋದರ ಕಿಮ್ ಜಾಂಗ್ ನಾಮ್ ಅವರ ಹತ್ಯೆಯ ಹಿಂದೆಯೂ ಇವರ ಕೈವಾಡವಿತ್ತು ಎಂಬ ಆರೋಪವಿದೆ. ಇಂತಹ ಕ್ರೂರ ಇತಿಹಾಸವಿರುವ ಕುಟುಂಬದಲ್ಲಿ, ಈಗ ಮಗಳು ಮತ್ತು ಸಹೋದರಿಯ ನಡುವಿನ ಈ ಅಧಿಕಾರದ ಜಟಾಪಟಿ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಆತಂಕಕಾರಿ ವಿಷಯವಾಗಿದೆ.

ಉತ್ತರ ಕೊರಿಯಾವು ಸದ್ಯ 50ಕ್ಕೂ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, ಅತ್ಯಂತ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದೆ. ಈ ಅಗಾಧ ಶಕ್ತಿಯ ನಿಯಂತ್ರಣವು ಒಬ್ಬ 13 ವರ್ಷದ ಹುಡುಗಿಯ ಕೈಗೆ ಸೇರುತ್ತದೆಯೇ ಅಥವಾ ಯುದ್ಧೋನ್ಮಾದದ ಹೇಳಿಕೆ ನೀಡುವ ಕಿಮ್‌ ಸಹೋದರಿಯ ಪಾಲಾಗುತ್ತದೆಯೇ ಎಂಬುದು ಇಡೀ ವಿಶ್ವದ ಭದ್ರತೆಯ ಮೇಲೆ ಪ್ರಭಾವ ಬೀರಲಿದೆ.

Exit mobile version