ಮೆಕ್ಸಿಕೊದಲ್ಲಿ ಧಾರ್ಮಿಕ ಆಚರಣೆ ವೇಳೆ ಗುಂಡಿನ ದಾಳಿ: 12 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Untitled design (2)

ಮೆಕ್ಸಿಕೊದ ಗುವಾನಾಜುವಾಟೊ ರಾಜ್ಯದ ಇರಪುವಾಟೊ ನಗರದಲ್ಲಿ ನಡೆದ ಧಾರ್ಮಿಕ ಆಚರಣೆಯೊಂದರ ವೇಳೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸುಮಾರು 20 ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ಜನರು ಬೀದಿಯಲ್ಲಿ ನೃತ್ಯ ಮಾಡುತ್ತಾ, ಮದ್ಯಪಾನ ಸೇವಿಸುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಭಯಭೀತರಾದ ಜನರು ಓಡಾಡಿದ ದೃಶ್ಯಗಳನ್ನು ಒಳಗೊಂಡ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇರಪುವಾಟೊದ ಅಧಿಕಾರಿ ರೊಡಾಲ್ಫೊ ಗೊಮೆಜ್ ಸೆರ್ವಾಂಟೆಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮೃತರ ಸಂಖ್ಯೆ 12ಕ್ಕೆ ಏರಿದೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ” ಎಂದು ದೃಢಪಡಿಸಿದ್ದಾರೆ.

ADVERTISEMENT
ADVERTISEMENT

ಮೆಕ್ಸಿಕೊದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಈ ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಘಟನೆಯ ತನಿಖೆಯನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಗುವಾನಾಜುವಾಟೊ ರಾಜ್ಯದಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. ಕಳೆದ ತಿಂಗಳು ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್‌ನ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಇದೇ ರೀತಿಯ ಗುಂಡಿನ ದಾಳಿಯಿಂದ 7 ಮಂದಿ ಮೃತಪಟ್ಟಿದ್ದರು.

ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಗುವಾನಾಜುವಾಟೊದಲ್ಲಿ 1,435 ನರಹತ್ಯೆಗಳು ದಾಖಲಾಗಿವೆ, ಇದು ದೇಶದ ಇತರ ರಾಜ್ಯಗಳಿಗಿಂತ ಎರಡು ಪಟ್ಟು ಹೆಚ್ಚು ಎಂದು ಅಂಕಿಅಂಶಗಳು ತೋರಿಸಿವೆ.

Exit mobile version