ನವದೆಹಲಿ: ಆರ್ಥಿಕ ಹಾಗೂ ರಾಜತಾಂತ್ರಿಕವಾಗಿ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗಿ ಮುನ್ನಡೆಯುತ್ತಿರುವ ಭಾರತ, ಇದೀಗ ಇಂಧನ ವಲಯದಲ್ಲಿಯೂ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ರಕ್ಷಣಾ ಇಲಾಖೆ ಹಾಗೂ ಸೇನಾ ವಿಚಾರದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿರುವ ಭಾರತ, ಇದೀಗ ಜಾಗತಿಕ ಇಂಧನ ಮಾರುಕಟ್ಟೆಯ ದೊಡ್ಡಣ್ಣ ಎನಿಸಿಕೊಂಡಿರುವ ರಷ್ಯಾಗೆ ಸಂಸ್ಕರಿಸಿದ ತೈಲವನ್ನು ರಫ್ತು ಮಾಡಲು ಮುಂದಾಗಿದೆ.
ರಷ್ಯಾಗೆ ಸರಬರಾಜಾಗಲಿದೆಯೇ ಭಾರತದ ಸಂಸ್ಕರಿಸಿದ ಆಯಿಲ್?
ಭಾರತ ಮತ್ತು ಚೀನಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ರಷ್ಯಾ ಹಾಗೂ ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದಿಂದ ರಷ್ಯಾಗೆ ಸಂಸ್ಕರಿಸಿದ ಇಂಧನ (ಪೆಟ್ರೋಲ್/ಗ್ಯಾಸೋಲಿನ್) ಸರಬರಾಜಾಗಲಿದೆ ಎಂಬ ಮಹತ್ವದ ಮಾಹಿತಿ ರಾಜತಾಂತ್ರಿಕ ವಲಯದಿಂದ ಹೊರಬಿದ್ದಿದೆ.
ಯುದ್ಧದ ಪರಿಣಾಮ: ರಷ್ಯಾದಲ್ಲಿ ಹೆಚ್ಚಿದ ಶುದ್ಧ ತೈಲದ ಬೇಡಿಕೆ ವಿಶ್ವದಲ್ಲೇ ಕಚ್ಚಾ ತೈಲವನ್ನು ಅತ್ಯಧಿಕ ಪ್ರಮಾಣದಲ್ಲಿ ಸಂಸ್ಕರಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕದ ನಂತರ ಭಾರತ ಪ್ರಮುಖ ಸ್ಥಾನವನ್ನು ಹೊಂದಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಭೀಕರ ಪರಿಣಾಮ ಇದೀಗ ರಷ್ಯಾದ ತೈಲ ಸಂಸ್ಕರಣಾ ವಲಯದ ಮೇಲೆ ಬೀರಿದೆ. ಉಕ್ರೇನ್‌ನ ನಿರಂತರ ಡ್ರೋನ್ ದಾಳಿಗಳಿಂದಾಗಿ ರಷ್ಯಾದ ಪ್ರಮುಖ ರಿಫೈನರಿಗಳು (ತೈಲ ಶುದ್ಧೀಕರಣ ಘಟಕಗಳು) ಹಾನಿಗೊಳಗಾಗಿದ್ದು, ಅಲ್ಲಿ ದೇಶೀಯವಾಗಿ ಇಂಧನ ಕೊರತೆ ಉಂಟಾಗಿದೆ. ಈ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹಾಗೂ ತನ್ನ ಮಾರುಕಟ್ಟೆಯನ್ನು ಸ್ಥಿರವಾಗಿಡಲು ರಷ್ಯಾಕ್ಕೆ ತಕ್ಷಣವೇ ಸಂಸ್ಕರಿಸಿದ ತೈಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ಆಪ್ತ ಮಿತ್ರ ರಾಷ್ಟ್ರವಾದ ಭಾರತದ ಸಹಾಯ ಕೋರಿದೆ.
ರೂಪಾಯಿ-ರೂಬೆಲ್ ವ್ಯವಹಾರ ಮತ್ತು ಚೀನಾಗೆ ಹಿನ್ನಡೆ
ರಷ್ಯಾ ಮತ್ತು ಭಾರತದ ನಡುವೆ ದಶಕಗಳ ಹಳೆಯ ಹಾಗೂ ನಂಬಿಕಸ್ಥ ಸ್ನೇಹ ಸಂಬಂಧವಿದೆ. ಜಾಗತಿಕ ವ್ಯಾಪಾರದಲ್ಲಿ ಚೀನಾದ ‘ಯುವಾನ್’ ಕರೆನ್ಸಿಗಿಂತ ಭಾರತದ ‘ರೂಪಾಯಿ’ ಮತ್ತು ರಷ್ಯಾದ ‘ರೂಬೆಲ್’ ಆಧಾರಿತ ನೇರ ಹಣಕಾಸು ವ್ಯವಹಾರವು ಉಭಯ ದೇಶಗಳಿಗೆ ಹೆಚ್ಚು ಸುಲಭ ಹಾಗೂ ಲಾಭದಾಯಕವಾಗಿದೆ. ಚೀನಾದ ಮೇಲಿನ ಅತಿಯಾದ ಅವಲಂಬನೆಯನ್ನು ತಪ್ಪಿಸಲು ಮತ್ತು ಭಾರತದ ಆರ್ಥಿಕ ಸ್ಥಿರತೆಯನ್ನು ಬಳಸಿಕೊಳ್ಳಲು ರಷ್ಯಾ ಮಾಸ್ಕೋದಿಂದ ನವದೆಹಲಿಯತ್ತ ಮುಖ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಏಷ್ಯಾದ ಹಲವು ದೇಶಗಳಲ್ಲಿ ಇಂಧನ ಬೆಲೆ ಏರಿಕೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಷ್ಯಾದ ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತ, ತೈಲ ಸಂಸ್ಕರಿಸಿ ನೀಡಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ರಷ್ಯಾದಿಂದಲೇ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ತಂದು, ಅದನ್ನು ಭಾರತದ ರಿಫೈನರಿಗಳಲ್ಲಿ ಶುದ್ಧೀಕರಿಸಿ, ಮರಳಿ ರಷ್ಯಾಗೆ ರಫ್ತು ಮಾಡುವ ಈ ನೂತನ ರಾಜತಾಂತ್ರಿಕ ನಡೆ ಉಭಯ ದೇಶಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
