ಮಧ್ಯಪ್ರಾಚ್ಯದಲ್ಲಿ ಮತ್ತೆ ಬಿಕ್ಕಟ್ಟು: ಹರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್!

Untitled design (76)

ಟೆಹ್ರಾನ್ (ಜೂನ್‌ 21): ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ ಬೆಳವಣಿಗೆಗಳ ನಡುವೆಯೇ, ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ಇರಾನ್ ಮತ್ತೆ ತನ್ನ ಬಹುದೊಡ್ಡ ಅಸ್ತ್ರವಾಗಿರುವ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಈ ಜಲಸಂಧಿಯ ಮೂಲಕ 20ಶೇ. ತೈಲಗಳು ವಿಶ್ವದ ವಿವಿಧ ದೇಶಗಳಿಗೆ ಸಾಗಣಿಕೆಯಾಗುತ್ತದೆ. ಪ್ರಪಂಚದ ಪ್ರಮುಖ ತೈಲ ಮತ್ತು ಅನಿಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಈ ಹರ್ಮುಜ್ ಜಲಮಾರ್ಗದ ಮೇಲೆ ನಿರ್ಬಂಧ ಹೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಆತಂಕವನ್ನು ಉಂಟುಮಾಡಿದೆ.

 

ಮತ್ತೆ ಹರ್ಮುಜ್ ಜಲಸಂಧಿ ಸಂಚಾರ ನಿರ್ಬಂಧಿಸಿದ ಇರಾನ್

ಇಸ್ರೇಲ್–ಲೆಬನಾನ್ ಸಂಘರ್ಷಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ

ತೈಲ ಮತ್ತು ಅನಿಲ ಸಾಗಣೆಗೆ ಅಡ್ಡಿಯಾಗುವ ಸಾಧ್ಯತೆ

ಹರ್ಮುಜ್ ಬಿಕ್ಕಟ್ಟಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ

ಭಾರತಕ್ಕೆ ಮತ್ತೆ ಶುರುವಾಯ್ತು ಪೆಟ್ರೋಲಿಯಂ ತೈಲ ಸಂಕಷ್ಟ

ಇದೀಗ ಇರಾನ್‌ ತನ್ನ ಹರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಕಾರಣದಿಂದ ಭಾರತಕ್ಕೆ ಮತ್ತೆ ಪೆಟ್ರೋಲಿಯಂ ತೈಲ ಸಂಕಷ್ಟ ಎದುರಾಗುವ ಭೀತಿ ಉಂಟಾಗಿದೆ.

ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿವೆ. ಲೆಬನಾನ್ ದಕ್ಷಿಣ ಭಾಗದಿಂದ ಇಸ್ರೇಲ್ ಸೇನೆ ಹಿಂಪಡೆಯದೇ ದಾಳಿಗಳನ್ನು ಮುಂದುವರಿಸಿರುವುದನ್ನು ಖಂಡಿಸಿ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ನಿಯಂತ್ರಿಸಲಾಗಿದೆ ಎಂದು ಇರಾನ್ ತಿಳಿಸಿದೆ.

“ಲೆಬನಾನ್‌ನಲ್ಲಿ ನಿರಂತರ ದಾಳಿಗಳಿಂದ ಸಾಮಾನ್ಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಒಪ್ಪಂದದ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಮೊದಲ ಹಂತವಾಗಿ ಜಲಮಾರ್ಗದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಇರಾನ್ ಎಚ್ಚರಿಕೆ ನೀಡಿದೆ.

ಹರ್ಮುಜ್ ಜಲಸಂಧಿ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾಗಿದ್ದು, ಪ್ರತಿದಿನ ಅಪಾರ ಪ್ರಮಾಣದ ಕಚ್ಚಾ ತೈಲ ಮತ್ತು ಇಂಧನ ಉತ್ಪನ್ನಗಳು ಈ ಮಾರ್ಗದ ಮೂಲಕ ಸಾಗುತ್ತವೆ. ಈ ಪ್ರದೇಶದಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಇಂಧನ ಬೆಲೆ, ಸಾಗಣೆ ವೆಚ್ಚ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ನಡುವೆ ಸಂಘರ್ಷ ಪೀಡಿತ ಪ್ರದೇಶದ ಸಮೀಪ ಸಿಲುಕಿರುವ ಭಾರತದ 9 ವಾಣಿಜ್ಯ ಹಡಗುಗಳನ್ನು ಗುರುತಿಸಲಾಗಿದೆ. ಭಾರತೀಯ ಸಿಬ್ಬಂದಿಯ ಸುರಕ್ಷತೆಗಾಗಿ ಅವರನ್ನು ಸ್ಥಳಾಂತರಿಸುವ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ.

ಇಸ್ರೇಲ್ ದಾಳಿಯಿಂದ ಕಳೆದ 36 ಗಂಟೆಗಳಲ್ಲಿ ಲೆಬನಾನ್‌ನಲ್ಲಿ 34 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಜ್ಬೊಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಮೊದಲ ಹಂತದಲ್ಲಿ 18 ಜನರು ಸಾವನ್ನಪ್ಪಿದ್ದು, ನಂತರದ ದಾಳಿಗಳಲ್ಲಿ ಮತ್ತೆ 16 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾದರೆ ಮಧ್ಯಪ್ರಾಚ್ಯದ ಭದ್ರತೆ ಮಾತ್ರವಲ್ಲದೆ, ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

Exit mobile version