ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯ ಒಡನಾಟದ ಫೋಟೋ & ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಈ ಆತ್ಮೀಯ ರಾಜತಾಂತ್ರಿಕ ನಡವಳಿಕೆ ಕೇವಲ ಭಾರತದ ಪ್ರಧಾನಿಗೆ ಮಾತ್ರ ಸೀಮಿತವಾಗಿಲ್ಲ..! ಮೆಲೋನಿ ಅವರು ವಿಶ್ವದ ಹಲವು ಪ್ರಮುಖ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದಾಗಲೂ ಇದೇ ರೀತಿಯ ಆತ್ಮೀಯತೆ ಮತ್ತು ಪರಸ್ಪರ ಗೌರವವನ್ನು ಪ್ರದರ್ಶಿಸುತ್ತಾರೆ.
1. ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಮೆಲೋನಿ
ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಮೆಲೋನಿ ಅವರು ಹಸ್ತಲಾಘವ ಮಾಡುತ್ತಾ ನಗುತ್ತಿರುವ ಅತ್ಯಂತ ಉತ್ಸಾಹಭರಿತ ಕ್ಷಣಗಳ ಹಲವು ಫೋಟೋ & ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಲಭ್ಯ ಇವೆ. ಈ ಚಿತ್ರಗಳು ಉಭಯ ನಾಯಕರ ನಡುವಿನ ಅನೌಪಚಾರಿಕ, ಮುಕ್ತ ಮತ್ತು ಸ್ನೇಹಪರ ರಾಜತಾಂತ್ರಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
2. ಬ್ರಿಟನ್ ಹಾಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಮೆಲೋನಿ
ಈ ಚಿತ್ರದಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಮೆಲೋನಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿರುವುದನ್ನು ನೋಡಬಹುದು. ಅಂತರರಾಷ್ಟ್ರೀಯ ಶೃಂಗಸಭೆಗಳು ಅಥವಾ ದ್ವಿಪಕ್ಷೀಯ ಭೇಟಿಗಳ ಸಂದರ್ಭದಲ್ಲಿ ಯುರೋಪಿಯನ್ ನಾಯಕರೊಂದಿಗೆ ಮೆಲೋನಿ ಅವರು ಹೊಂದಿರುವ ಉತ್ತಮ ಬಾಂಧವ್ಯವನ್ನು ಇದು ಪ್ರತಿಬಿಂಬಿಸುತ್ತದೆ.
3. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಮೆಲೋನಿ
ಈ ಚಿತ್ರದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಮೆಲೋನಿ ಅವರು ಸಾಂಪ್ರದಾಯಿಕ ಯುರೋಪಿಯನ್ ಶೈಲಿಯಲ್ಲಿ ಪರಸ್ಪರ ಕೆನ್ನೆಗೆ ಕೆನ್ನೆ ಮುಟ್ಟಿಸಿ ಆತ್ಮೀಯವಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನೆರೆಹೊರೆಯ ರಾಷ್ಟ್ರಗಳ ನಾಯಕರಾಗಿ ಇವರಿಬ್ಬರ ಒಡನಾಟವು ಜಾಗತಿಕ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
4. ಅಲ್ಬೇನಿಯಾ ಪ್ರಧಾನಿ ಎಡಿ ರಾಮಾ ಅವರೊಂದಿಗೆ ಮೆಲೋನಿ
ಈ ಚಿತ್ರದಲ್ಲಿ ಅಲ್ಬೇನಿಯಾ ಪ್ರಧಾನಿ ಎಡಿ ರಾಮಾ ಅವರೊಂದಿಗೆ ಮೆಲೋನಿ ಅವರು ಅತ್ಯಂತ ಆತ್ಮೀಯವಾಗಿ ಮುಖಾಮುಖಿಯಾಗಿ ಮಾತನಾಡುತ್ತಿರುವುದನ್ನು ಕಾಣಬಹುದು. ವಲಸೆ ನಿಯಂತ್ರಣ ಸೇರಿದಂತೆ ಹಲವು ಪ್ರಾದೇಶಿಕ ಒಪ್ಪಂದಗಳ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ನಡುವೆ ಉತ್ತಮ ಹೊಂದಾಣಿಕೆಯಿದೆ.
ಇದು ಮೆಲೋನಿ ಡಿಪ್ಲೊಮಸಿ..!
ಈ ಎಲ್ಲಾ ಚಿತ್ರಗಳನ್ನು ಗಮನಿಸಿದಾಗ, ಜಾರ್ಜಿಯಾ ಮೆಲೋನಿ ಅವರ ಈ ನಡವಳಿಕೆಯು ಅವರ ವೈಯಕ್ತಿಕ ರಾಜತಾಂತ್ರಿಕ ಶೈಲಿಯಾಗಿದೆ ಅನ್ನೋದು ಸ್ಪಷ್ಟವಾಗುತ್ತದೆ. ಅವರು ಕೇವಲ ಒಬ್ಬ ನಾಯಕರೊಂದಿಗೆ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಇಟಲಿಯ ಪ್ರಭಾವವನ್ನು ಹೆಚ್ಚಿಸಲು ಎಲ್ಲಾ ಪ್ರಮುಖ ದೇಶಗಳ ಮುಖ್ಯಸ್ಥರೊಂದಿಗೆ ಅತ್ಯಂತ ನಿಕಟ ಮತ್ತು ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುತ್ತಾರೆ. ಇದು ಅಂತರರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಸುವಲ್ಲಿ ಅವರ ವಿಶಿಷ್ಟ ಕಾರ್ಯತಂತ್ರವಾಗಿದೆ. ಆದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಗೆ ಮೆಲೋನಿ ಅವರು ಆತ್ಮೀಯತೆ ಪ್ರದರ್ಶಿಸಿದ ಫೋಟೋಗಳನ್ನಷ್ಟೇ ಬಳಸಿಕೊಂಡು ಇಬ್ಬರೂ ವಿಶ್ವ ನಾಯಕರ ನಡುವಣ ಆಪ್ತತೆಯ ಕುರಿತಾಗಿ ಲಘುವಾದ ಹಾಗೂ ಅಪ್ರಬುದ್ಧ ವ್ಯಾಖ್ಯಾನಗಳನ್ನು ಮಾಡುತ್ತಿರೋದು ನಿಜಕ್ಕೂ ರಾಜಕೀಯ ದುರಾದೃಷ್ಟಕರ ಸನ್ನಿವೇಶ ಎನ್ನಬಹುದು..!