ಪ್ಯಾರಿಸ್, (ಜೂನ್ 29): ಈ ವರ್ಷದ ಬೇಸಿಗೆ ಐರೋಪ್ಯ ರಾಷ್ಟ್ರಗಳನ್ನು ಅತ್ಯಂತ ಭೀಕರವಾಗಿ ಕಾಡಿದೆ. ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಟ್ಜರ್‌ಲ್ಯಾಂಡ್, ಡೆನ್ಮಾರ್ಕ್ ಸೇರಿದಂತೆ ಹಲವು ದೇಶಗಳಲ್ಲಿ ತಾಪಮಾನ 40ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಬಿಸಿಗಾಳಿಯ ತೀವ್ರತೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜೂನ್ 21ರ ನಂತರ ಫ್ರಾನ್ಸ್‌ನಲ್ಲಿ ಮಾತ್ರ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಯುರೋಪ್‌ನಾದ್ಯಂತ ಬಿಸಿಲಿನ ಪರಿಣಾಮ 1,300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರಲ್ಲಿ ಹೆಚ್ಚಿನವರು 65 ವರ್ಷ ಮೇಲ್ಪಟ್ಟವರಾಗಿದ್ದು, ಈ ವರ್ಷದ ಸಾವಿನ ಪ್ರಮಾಣ ಸಾಮಾನ್ಯ ವರ್ಷಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಿಸಿಗಾಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಸಂಖ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 80ರಷ್ಟು ಏರಿಕೆಯಾಗಿದೆ.
ಸ್ಕ್ಯಾಂಡಿನೇವಿಯಾ ಹಾಗೂ ಆಲ್ಪ್ಸ್ ಪ್ರದೇಶಗಳಲ್ಲಿಯೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ವರ್ಷ ಪೂರ್ತಿ ತಂಪಾಗಿರುವ ಈ ಪ್ರದೇಶಗಳಲ್ಲಿ ಉಷ್ಣಾಂಶದ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ. ಡೆನ್ಮಾರ್ಕ್‌ನಲ್ಲಿ ಶನಿವಾರ ದಾಖಲಾದ 40 ಡಿಗ್ರಿ ತಾಪಮಾನ ದೇಶದ ಇತಿಹಾಸದಲ್ಲೇ ಅತ್ಯಂತ ಬಿಸಿಯಾದ ದಿನಗಳಲ್ಲಿ ಒಂದಾಗಿದೆ ಎಂದು ತಿಳಿದು ಬಂದಿದೆ.
ಇದರ ಪರಿಣಾಮವಾಗಿ ಸ್ವಿಟ್ಜರ್‌ಲ್ಯಾಂಡ್‌ನ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮುದ್ರಮಟ್ಟ ಏರಿಕೆ, ಭೂಕುಸಿತ ಮತ್ತು ಹಠಾತ್ ಪ್ರವಾಹಗಳ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಸಾಮಾನ್ಯವಾಗಿ ಪ್ರತಿಭಟನೆಗಳು ಹಾಗೂ ಗಲಭೆ ನಿಯಂತ್ರಣಕ್ಕೆ ಬಳಸುವ ಜಲಫಿರಂಗಿಗಳನ್ನು ಇದೀಗ ನಗರಕ್ಕೆ ತಂಪು ನೀಡಲು ಬಳಸಲಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ನೀರನ್ನು ಸಿಂಪಡಿಸುವ ಮೂಲಕ ಜನರಿಗೆ ಬಿಸಿಲಿನಿಂದ ಕೊಂಚ ನಿರಾಳತೆ ನೀಡುವ ಪ್ರಯತ್ನ ನಡೆಯುತ್ತಿದೆ.
ಇತ್ತ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಫ್ಯಾನ್ ಹಾಗೂ ಶೀತಲೀಕರಣ ಉಪಕರಣಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಮತ್ತೊಂದೆಡೆ ಇಟಲಿಯ 18 ನಗರಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದ್ದು, ಜನರು ಅಗತ್ಯವಿಲ್ಲದೆ ಹೊರಗೆ ಬರದಂತೆ ಸರ್ಕಾರ ಸೂಚನೆ ನೀಡಿದೆ.
ಬಿಸಿಗಾಳಿಯ ಪರಿಣಾಮ ವಿದ್ಯುತ್ ಕ್ಷೇತ್ರದ ಮೇಲೂ ಬಿದ್ದಿದೆ. ಅಣು ವಿದ್ಯುತ್ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ಬಳಸುವ ಸ್ವಿಟ್ಜರ್‌ಲ್ಯಾಂಡ್‌ನ ಆರೆ ನದಿಯ ನೀರಿನ ತಾಪಮಾನವೇ ಹೆಚ್ಚಾಗಿರುವುದರಿಂದ, ಯುರೋಪಿನ ಅತ್ಯಂತ ಹಳೆಯ ಅಣು ವಿದ್ಯುತ್ ಸ್ಥಾವರಗಳಲ್ಲಿ ಒಂದರ ಕಾರ್ಯಾಚರಣೆಯನ್ನು ಶುಕ್ರವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮ ಉಷ್ಣ ಅಲೆಗಳು ವರ್ಷದಿಂದ ವರ್ಷಕ್ಕೆ ತೀವ್ರಗೊಳ್ಳುತ್ತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ವಿಪರೀತ ಬಿಸಿಗಾಳಿಗಳನ್ನು ಎದುರಿಸಲು ದೀರ್ಘಕಾಲೀನ ಪರಿಸರ ಸಂರಕ್ಷಣಾ ಕ್ರಮಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
