ಆಕಾಶದಿಂದ ಹೆದ್ದಾರಿಗೆ ಬಿದ್ದ ಜೆಟ್ ವಿಮಾನ: ಕ್ಷಣಾರ್ಧದಲ್ಲೇ ಸುಟ್ಟು ಭಸ್ಮ,ಇಬ್ಬರು ಸಾವು!

ಇಟಲಿಯ ಬ್ರೆಸಿಯಾದಲ್ಲಿ ಸಣ್ಣ ವಿಮಾನ ಅಪಘಾತ

Untitled design (20)

ಉತ್ತರ ಇಟಲಿಯ ಬ್ರೆಸಿಯಾ ಪ್ರಾಂತ್ಯದ A21 ಕೊರ್ಡಮೊಲೆ-ಒಸ್ಪಿಟಲೆಟ್ಟೊ ಹೆದ್ದಾರಿಯಲ್ಲಿ ಜುಲೈ 22ರಂದು ಫ್ರೀಸಿಯಾ ಆರ್‌ಜಿ ಅಲ್ಟ್ರಾಲೈಟ್ ಜೆಟ್ ವಿಮಾನವೊಂದು ಆಕಾಶದಿಂದ ರಭಸವಾಗಿ ಬಿದ್ದು ಭೀಕರವಾಗಿ ಸ್ಫೋಟಗೊಂಡ ಘಟನೆ ನಡೆದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು 75 ವರ್ಷದ ಮಿಲಾನ್‌ನ ವಕೀಲ ಹಾಗೂ ಪೈಲಟ್ ಸೆರ್ಗಿಯೋ ರಾವಗ್ಲಿಯಾ ಮತ್ತು ಅವರ 50 ವರ್ಷದ ಸಂಗಾತಿ ಆನ್ ಮಾರಿಯಾ ಡಿ ಸ್ಟೆಫಾನೊ—ದಹನಗೊಂಡು ಮೃತಪಟ್ಟಿದ್ದಾರೆ.

ವಿಮಾನವು ಪಿಯಾಸೆಂಜಾದ ಗ್ರಾಗ್ನಾನೊ ಟ್ರೆಬ್ಬಿಯೆನ್ಸೆ ರನ್‌ವೇಯಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಸುಂಟರಗಾಳಿಯಂತೆ ತಿರುಗಿ, ರಸ್ತೆಗೆ ನಾಸಿಡೈವ್ ಆಗಿ ಬಿದ್ದಿದೆ. ಸಂಭವನೀಯ ತುರ್ತು ಲ್ಯಾಂಡಿಂಗ್ ಪ್ರಯತ್ನದ ವೇಳೆ ಪೈಲಟ್ ವೇಗವನ್ನು ಮರಳಿ ಪಡೆಯಲು ವಿಫಲನಾದ ಕಾರಣ ವಿಮಾನ ನಿಯಂತ್ರಣಕ್ಕೆ ಸಿಗದೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಭೀಕರ ದೃಶ್ಯವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಮಾನವು ರಸ್ತೆಗೆ ಡಿಕ್ಕಿಯಾಗುತ್ತಿದ್ದಂತೆ ದೊಡ್ಡ ಜ್ವಾಲೆಯೊಂದಿಗೆ ಧಗಧಗನೆ ಉರಿದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಸಮಯದಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಜ್ವಾಲೆಯ ಮೂಲಕವೇ ಸಾಗಿದವು, ಆದರೆ ಯಾವುದೇ ಕಾರು ಅಪಘಾತಕ್ಕೀಡಾಗಿಲ್ಲ. ಒಂದು ಕಾರಿನ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೊಬ್ಬ ಚಾಲಕನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯ ಸಾಕ್ಷಿಯೊಬ್ಬರಾದ ಎಂಜೊ ಬ್ರೆಗೊಲಿ, “ವಿಮಾನ ತುಂಬಾ ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು, ಆದರೆ ಯಾವುದೇ ತೊಂದರೆಯಲ್ಲಿರುವಂತೆ ಕಾಣಲಿಲ್ಲ. ಇದ್ದಕ್ಕಿದ್ದಂತೆ ಪೈಲಟ್ ನಿಯಂತ್ರಣ ಕಳೆದುಕೊಂಡಂತೆ ತೋರಿತು, ವಿಮಾನ ಸುಂಟರಗಾಲಳಿಯಂತೆ ತಿರುಗಿ ರಸ್ತೆಗೆ ಬಿದ್ದಿತು,” ಎಂದು ಕೊರಿಯರ್ ಡೆಲ್ಲಾ ಸೆರಾಕ್ಕೆ ತಿಳಿಸಿದ್ದಾರೆ.

ಇಟಲಿಯ ರಾಷ್ಟ್ರೀಯ ವಿಮಾನ ಸುರಕ್ಷತಾ ಸಂಸ್ಥೆ (ANSV) ತನಿಖೆಯನ್ನು ಆರಂಭಿಸಿದ್ದು, ವಿಮಾನದ ತಾಂತ್ರಿಕ ದಾಖಲೆಗಳು, ನಿರ್ವಹಣೆ ದಾಖಲೆಗಳು, ಮತ್ತು ಒಡದಿರುವ ತುಂಡುಗಳನ್ನು ಪರಿಶೀಲಿಸುತ್ತಿದೆ. ಬ್ರೆಸಿಯಾದ ಸಾರ್ವಜನಿಕ ಪ್ರಾಸಿಕ್ಯೂಟರ್ ಕಚೇರಿಯು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದು, ಯಾಂತ್ರಿಕ ದೋಷ ಅಥವಾ ಪೈಲಟ್‌ನ ಆರೋಗ್ಯ ಸಮಸ್ಯೆಯೇ ದುರಂತಕ್ಕೆ ಕಾರಣವಾಯಿತೇ ಎಂಬುದನ್ನು ಪರಿಶೀಲಿಸುತ್ತಿದೆ.

ವಿಮಾನ ಎಲ್ಲಿಗೆ ತೆರಳುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ, ಏಕೆಂದರೆ ಈ ರೀತಿಯ ಅಲ್ಟ್ರಾಲೈಟ್ ವಿಮಾನಗಳಿಗೆ ಗಮ್ಯಸ್ಥಾನವನ್ನು ಘೋಷಿಸುವ ಕಡ್ಡಾಯ ನಿಯಮವಿಲ್ಲ. ಬ್ಲಾಕ್ ಬಾಕ್ಸ್ ಇಲ್ಲದ ಕಾರಣ ದುರಂತದ ನಿಖರ ಕಾರಣವನ್ನು ಕಂಡುಹಿಡಿಯುವುದು ಸವಾಲಿನ ಕೆಲಸವಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಫ್ರಾನ್ಸೆಸ್ಕೊ ಪ್ರೀತೆ ಹೇಳಿದ್ದಾರೆ.

Exit mobile version