ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಇದೀಗ ‘ಬಿ ರೆಡಿ’ ಅಭಿಯಾನ ಸದ್ದು ಮಾಡುತ್ತಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ಯುರೋಪ್ ಖಂಡದ ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಕನಿಷ್ಠ 72 ಗಂಟೆಗಳ ಕಾಲ ಬದುಕು ಸಾಗಿಸಲು ಅಗತ್ಯವಿರುವ ಆಹಾರ, ಕುಡಿಯುವ ನೀರು, ಔಷಧಗಳು ಸೇರಿದಂತೆ ಮೂಲಭೂತ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸಂದೇಶ ನೀಡುತ್ತಿವೆ. ಐರೋಪ್ಯ ಒಕ್ಕೂಟದ ದೇಶಗಳಲ್ಲಿಯೂ ಇಂತಹ ತುರ್ತು ಪರಿಸ್ಥಿತಿ ಎದುರಿಸುವ ಸಿದ್ಧತಾ ಅಭಿಯಾನಕ್ಕೆ ಒತ್ತು ನೀಡಲಾಗುತ್ತಿದೆ.
ಸಾಮಾನ್ಯವಾಗಿ ಪ್ರವಾಹ, ಭೂಕಂಪ, ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಇಂತಹ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತದೆ. ಆದರೆ, ಇದೀಗ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಏಕಕಾಲದಲ್ಲಿ ನಾಗರಿಕರಿಗೆ ತುರ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ತುರ್ತು ಪರಿಸ್ಥಿತಿ ಎದುರಾದಾಗ ಸರ್ಕಾರದ ನೆರವು ತಲುಪುವವರೆಗೆ ಜನರು ಸ್ವತಃ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಬೇಕು ಎಂಬುದು ಈ ಅಭಿಯಾನದ ಪ್ರಮುಖ ಉದ್ದೇಶ. ಕನಿಷ್ಠ ಮೂರು ದಿನಗಳಿಗೆ ಸಾಕಾಗುವಷ್ಟು ಆಹಾರ, ಕುಡಿಯುವ ನೀರು, ಅಗತ್ಯ ಔಷಧಗಳು, ಪ್ರಥಮ ಚಿಕಿತ್ಸಾ ಕಿಟ್, ಬ್ಯಾಟರಿ, ಟಾರ್ಚ್, ಪವರ್ ಬ್ಯಾಂಕ್ ಸೇರಿದಂತೆ ಮೂಲಭೂತ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.
ಅಮೆರಿಕ ಮತ್ತು ಯುರೋಪ್ನ ವಿವಿಧ ದೇಶಗಳಲ್ಲಿ ನಾಗರಿಕರ ತುರ್ತು ಸಿದ್ಧತೆಗೆ ಸಂಬಂಧಿಸಿದ ಮಾರ್ಗಸೂಚಿಗಳು ಮುನ್ನೆಲೆಗೆ ಬಂದಿವೆ. ಮತ್ತೊಂದೆಡೆ, ಅಮೆರಿಕದ ಸೇನಾ ನೆಲೆಗಳಲ್ಲಿ 90 ದಿನಗಳಿಗೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿಯೂ ಕುತೂಹಲ ಮೂಡಿಸಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಜಗತ್ತು ಮತ್ತೊಂದು ಮಹಾಯುದ್ಧದತ್ತ ಸಾಗುತ್ತಿದೆಯೇ? ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಯಾವುದಾದರೂ ದೊಡ್ಡ ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿವೆಯೇ? ಅಥವಾ ಸೈಬರ್ ದಾಳಿ, ವಿದ್ಯುತ್ ವ್ಯವಸ್ಥೆ ಸ್ಥಗಿತ, ಸಂವಹನ ಜಾಲಗಳ ಮೇಲಿನ ದಾಳಿ ಹಾಗೂ ಇತರ ಹೈಬ್ರಿಡ್ ಬೆದರಿಕೆಗಳನ್ನು ಎದುರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.
ಯುರೋಪಿಯನ್ ಒಕ್ಕೂಟ 2025ರಲ್ಲೇ ತನ್ನ ಸಿದ್ಧತಾ ಕಾರ್ಯತಂತ್ರದ ಭಾಗವಾಗಿ ತುರ್ತು ಸಂದರ್ಭಗಳಲ್ಲಿ ಕನಿಷ್ಠ 72 ಗಂಟೆಗಳ ಕಾಲ ಸ್ವಾವಲಂಬಿಯಾಗಿ ಬದುಕಲು ನಾಗರಿಕರನ್ನು ಸಜ್ಜುಗೊಳಿಸುವ ಗುರಿ ಪ್ರಕಟಿಸಿತ್ತು. ಯುದ್ಧ, ಸೈಬರ್ ದಾಳಿ, ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಕೋಪಗಳನ್ನೂ ಸಂಭವನೀಯ ಅಪಾಯಗಳೆಂದು ಪರಿಗಣಿಸಲಾಗಿದೆ.
