ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಅಚ್ಚರಿಯ ತಿರುವು ನಡೆದಿದೆ. ಕೇವಲ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಅದ್ಭುತ ಗೆಲುವು ಸಾಧಿಸಿ, ಡಿಎಂಕೆಯ ಸತತ ಎರಡನೇ ಅವಧಿಯ ಕನಸನ್ನು ನುಚ್ಚುನೂರು ಮಾಡಿದೆ. ಈ ಫಲಿತಾಂಶದೊಂದಿಗೆ, ಸಿನಿಮಾ ಸೂಪರ್ಸ್ಟಾರ್ ವಿಜಯ್ ಅವರು ಪ್ರಬಲ ರಾಜಕೀಯ ಶಕ್ತಿಯಾಗಿ ಉದಯಿಸಿದ್ದಾರೆ.
ಈಗ, ವಿಜಯ್ ಅವರ ಬಾಲ್ಯದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆಯ ದಿಗ್ಗಜರಾದ ಡಾ. ಕರುಣಾನಿಧಿ ಅವರ ಹಿಂದೆ ಬಾಲಕ ವಿಜಯ್ ನಿಂತಿರುವ ಅಪರೂಪದ ಫೋಟೋ ಇದು. ಒಂದು ಸಾರ್ವಜನಿಕ ಉದ್ಘಾಟನಾ ಸಮಾರಂಭದಲ್ಲಿ ಕರುಣಾನಿಧಿ ರಿಬ್ಬನ್ ಕತ್ತರಿಸುತ್ತಿದ್ದರೆ, ಅವರ ಹಿಂದೆ ಚಿಕ್ಕ ಹುಡುಗನಾಗಿ ವಿಜಯ್ ನಿಂತಿರುವುದು ಕಂಡುಬರುತ್ತದೆ.
ಡಿಎಂಕೆ ಪಕ್ಷದ ಹೀನಾಯ ಸೋಲಿನ ನಂತರ, ಹಾಲಿ ಮುಖ್ಯಮಂತ್ರಿ M. K. Stalin ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಈ ಬೆಳವಣಿಗೆಗಳ ನಡುವೆ ವಿಜಯ್ ಅವರ ನಾಯಕತ್ವದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಿದೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಈ ಫೋಟೋವನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ..ಅದರೊಂದಿಗೆ ಬರೆದ ಮಾತುಗಳು ಕೂಡ ಗಮನ ಸೆಳೆಯುತ್ತಿವೆ. “ತನ್ನ ಹಿಂದೆ ನಿಂತಿರುವ ಈ ಹುಡುಗ ಒಂದು ದಿನ ತನ್ನ ಪಕ್ಷವನ್ನೇ ಮುಗಿಸುತ್ತಾನೆ ಎಂದು ಕಲೈನಾರ್ ಕನಸಿನಲ್ಲೂ ಊಹಿಸಿರಲಿಲ್ಲ” ಎಂಬ ಅವರ ಮಾತುಗಳು ದೊಡ್ಡ ಅರ್ಥ ಪಡೆದುಕೊಂಡಿವೆ. ಇದು ಕೇವಲ ಫೋಟೋ ಅಲ್ಲ, ಕಾಲಚಕ್ರದ ವಿಚಿತ್ರ ಆಟ ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.
TVK ಶಾಸಕಾಂಗ ಪಕ್ಷದ ನಾಯಕನಾಗಿ ವಿಜಯ್ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ಕಾರ ರಚನೆಗೆ ಪಕ್ಷ ಸಜ್ಜಾಗಿದೆ. ಪಕ್ಷದ ನಾಯಕರು ಮತ್ತು ಶಾಸಕರು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. “ಇದು ಒಂದು ಮ್ಯಾಜಿಕ್ ಕ್ಷಣ” ಎಂದು ಶಾಸಕ ವಿ.ಎನ್.ಎಸ್. ಮುಸ್ತಫಾ ಹೇಳಿದ್ದಾರೆ.
ಇನ್ನೂ ಮುಂದೆ, ರಾಜ್ಯಪಾಲರಿಂದ ಆಹ್ವಾನ ಬಂದರೆ ವಿಜಯ್ ಅವರಿಗೆ ಬೆಂಬಲ ನೀಡುವ ಶಾಸಕರ ಸಂಖ್ಯೆ 130 ರಿಂದ 135ರ ನಡುವೆ ಏರಬಹುದು ಎಂದು TVK ನಾಯಕರು ಹೇಳಿದ್ದಾರೆ. ಇದರಿಂದ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯೆಯನ್ನು ಸುಲಭವಾಗಿ ತಲುಪಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಈ ವಾರವೇ ವಿಜಯ್ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.





