ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಸಂಭ್ರಮ: ಕಾಮಿಡಿ ನಡುವೆ ಸ್ಪರ್ಧಿಗಳ ಹೊಸ ಲುಕ್ ವೈರಲ್

Untitled design 2026 01 17T113512.449

ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12 ತನ್ನ ಅಂತಿಮ ಘಟ್ಟ ತಲುಪಿದೆ. ಜನವರಿ 18ರಂದು ನಡೆಯಲಿರುವ ಮಹಾ ಫಿನಾಲೆಗಾಗಿ ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿದೆ. ಈ ಬಾರಿಯ ಫಿನಾಲೆ ರೇಸ್‌ನಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಸ್ಪರ್ಧಿಗಳಾಗಿ ಕಣದಲ್ಲಿದ್ದಾರೆ.

ಫಿನಾಲೆಗೂ ಮುನ್ನ ಗಿಲ್ಲಿ ನಟನ ಕಾಮಿಡಿ ಕ್ವಾಟ್ಲೆ

ಫಿನಾಲೆಗಾಗಿ ಮನೆಯೊಳಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಸ್ಪರ್ಧಿಗಳಿಗೆ ವಿಶೇಷ ಮೇಕ್ ಓವರ್ ಮಾಡಿಸಲಾಗಿದೆ. ಇದರಲ್ಲಿ ಗಿಲ್ಲಿ ನಟನ ಹೊಸ ಲುಕ್ ಅಭಿಮಾನಿಗಳ ಮನ ಗೆದ್ದಿದೆ. ಗಿಲ್ಲಿಗೆ ಸ್ಟೈಲಿಶ್ ಹೇರ್ ಕಟ್ ಮತ್ತು ಫೇಶಿಯಲ್ ಮಸಾಜ್ ಮಾಡಿಸಲಾಗಿದ್ದು, ಅವರ ಹೊಸ ಲುಕ್ ಕಂಡು ಸಹಸ್ಪರ್ಧಿಗಳೇ ಬೆರಗಾಗಿದ್ದಾರೆ. ನಿನ್ನ ಮುಖ ಆಗಲೇ ಬೆಳ್ಳಗಾಗಿ ಮಿಂಚುತ್ತಿದೆ, ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದೀಯಾ ಎಂದು ರಘು ಮತ್ತು ರಕ್ಷಿತಾ ಕಾಲೆಳೆದಿದ್ದಾರೆ.

ಕಾವ್ಯ ಅವರು ಮುಖಕ್ಕೆ ಮಾಸ್ಕ್ ಹಾಕಿಸಿಕೊಂಡಾಗ, ಗಿಲ್ಲಿ ತಮ್ಮದೇ ಸ್ಟೈಲ್‌ನಲ್ಲಿ ಇದನ್ನು ಗಂಡಸರೂ ಹಾಕಿಸಿಕೊಳ್ಳಬಹುದಾ ? ಎಂದು ಕೇಳಿ ಎಲ್ಲರನ್ನ ನಗಿಸುತ್ತಾರೆ. ಈ ನಡುವೆ ರಕ್ಷಿತಾ ಮೆನು ಕೊಡಿ ನೋಡೋಣ ಎಂದಾಗ, ಗಿಲ್ಲಿ ಇದೇನು ಮಿಲಿಟರಿ ಹೋಟೆಲ್ಲಾ ? ಎಂದು ಪಂಚ್ ಕೊಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ.

ಹನುಮಂತು ದಾಖಲೆಗೆ ಗಿಲ್ಲಿ ನಟ ಸವಾಲ್ ?

ಕಳೆದ ಸೀಸನ್‌ನಲ್ಲಿ ಗಾಯಕ ಹನುಮಂತ ಲಮಾಣಿ ಅವರು ಬರೋಬ್ಬರಿ 5.23 ಕೋಟಿ ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿದ ದಾಖಲೆ ಬರೆದಿದ್ದರು. ಪ್ರಸ್ತುತ ಗಿಲ್ಲಿ ನಟನಿಗೆ ಇರುವ ಜನಪ್ರಿಯತೆ ಮತ್ತು ಸೋಶಿಯಲ್ ಮೀಡಿಯಾ ಟ್ರೆಂಡ್ ನೋಡಿದರೆ, ಅವರು ಹನುಮಂತು ಅವರ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಹೆಚ್ಚಾಗಿದೆ. ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ 2.53 ಕೋಟಿ ಮತಗಳನ್ನು ಪಡೆದಿದ್ದರು.

ಇಂದಿನ ಸಂಚಿಕೆಯಲ್ಲಿ ಪ್ರೀ-ಫಿನಾಲೆ ಹವಾ

ಕಿಚ್ಚ ಸುದೀಪ್ ಅವರು ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯುಸಿ ಇರುವುದರಿಂದ ಜನವರಿ 17ರಂದು (ಇಂದು) ಫಿನಾಲೆ ಬದಲಿಗೆ ವಿಶೇಷ ಪ್ರೀ-ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಇದರಲ್ಲಿ ಸ್ಪರ್ಧಿಗಳ ವಿಶೇಷ ನೃತ್ಯ ಪ್ರದರ್ಶನಗಳು ಮತ್ತು ಮನೆಯೊಳಗಿನ ಸ್ಮರಣೀಯ ಕ್ಷಣಗಳನ್ನು ತೋರಿಸಲಾಗುತ್ತದೆ. ಜನವರಿ 18ರಂದು ಸಂಜೆ 6 ಗಂಟೆಯಿಂದ ಮಹಾ ಫಿನಾಲೆ ಆರಂಭವಾಗಲಿದ್ದು, ಅಂದೇ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

Exit mobile version