ನವರಾತ್ರಿ ಆರಂಭ: ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆ

Untitled design (1)

2026ರ ನವರಾತ್ರಿ ಅಕ್ಟೋಬರ್ 11ರಂದು ಅಂದರೆ ಇಂದಿನಿಂದ ಆರಂಭವಾಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಭಕ್ತಿಯಿಂದ ಪೂಜಿಸಿ ನವರಾತ್ರಿ ಆಚರಣೆಗೆ ಶುಭಾರಂಭ ಮಾಡಲಾಗುತ್ತದೆ.

ನವರಾತ್ರಿ ಹಬ್ಬದ ಮೊದಲ ದಿನ ದುರ್ಗಾಮಾತೆಯ ಮೊದಲ ಸ್ವರೂಪವಾದ ಶೈಲಪುತ್ರಿ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ‘ಶೈಲಪುತ್ರಿ’ ಎಂದರೆ ಪರ್ವತ ರಾಜನ ಮಗಳು ಎಂದರ್ಥ. ಪರ್ವತರಾಜ ಹಿಮಾಲಯನ ಪುತ್ರಿಯಾಗಿ ಅವತರಿಸಿದ ಈ ದೇವಿಯು ಆದಿ ಪರಾಶಕ್ತಿಯ ಸ್ವರೂಪವೆಂದು ನಂಬಲಾಗಿದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಆರಾಧನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ಆತ್ಮಸ್ಥೈರ್ಯ ಮತ್ತು ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶೈಲಪುತ್ರಿ ದೇವಿಯು ಎರಡು ಕೈಗಳನ್ನು ಹೊಂದಿದ್ದು, ಬಲಗೈಯಲ್ಲಿ ತ್ರಿಶೂಲ ಹಾಗೂ ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದಿರುತ್ತಾಳೆ. ಹಣೆಯ ಮೇಲೆ ಅರ್ಧಚಂದ್ರನನ್ನು ಧರಿಸಿರುವ ದೇವಿಯ ವಾಹನ ನಂದಿ ಅಥವಾ ವೃಷಭ. ಪಾರ್ವತಿ, ಭವಾನಿ ಹಾಗೂ ಹೇಮಾವತಿ ಎಂಬ ಹೆಸರುಗಳಿಂದಲೂ ಈ ದೇವಿಯನ್ನು ಕರೆಯಲಾಗುತ್ತದೆ.

ಶೈಲಪುತ್ರಿ ದೇವಿಯ ಪೌರಾಣಿಕ ಹಿನ್ನೆಲೆ

ಶೈಲಪುತ್ರಿಯ ಪೌರಾಣಿಕ ಕಥೆಯು ಸತಿ ದೇವಿಯ ಕಥೆಯೊಂದಿಗೆ ಬೆಸೆದುಕೊಂಡಿದೆ. ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಪುತ್ರಿಯಾಗಿ ಸತಿ ಜನಿಸಿದ್ದಳು. ಶಿವನನ್ನು ವಿವಾಹವಾದ ಬಳಿಕ ಸುಖವಾಗಿ ಜೀವನ ನಡೆಸುತ್ತಿದ್ದಳು. ಆದರೆ ದಕ್ಷನು ಆಯೋಜಿಸಿದ್ದ ಯಜ್ಞಕ್ಕೆ ಶಿವನನ್ನು ಆಹ್ವಾನಿಸದೆ ಅವಮಾನಿಸಿದ್ದನು. ಆದರೂ ತವರುಮನೆಯ ಮೇಲಿನ ಪ್ರೀತಿಯಿಂದ ಸತಿಯು ಯಜ್ಞಕ್ಕೆ ತೆರಳಲು ಬಯಸಿದಳು.

ಶಿವನು ಮನಸ್ಸಿನಿಂದ ಒಪ್ಪದಿದ್ದರೂ ಸತಿಯ ಆಸೆಯನ್ನು ಗೌರವಿಸಿ ತವರಿಗೆ ತೆರಳಲು ಅನುಮತಿ ನೀಡಿದನು. ಆದರೆ ಯಜ್ಞಕ್ಕೆ ತೆರಳಿದ ಸತಿಗೆ ಅಲ್ಲಿ ನಿರೀಕ್ಷಿಸಿದ ಗೌರವ ಸಿಗಲಿಲ್ಲ. ದಕ್ಷನು ಶಿವನ ವಿರುದ್ಧ ಅವಮಾನಕಾರಿ ಮಾತುಗಳನ್ನು ಆಡಿದನು. ಇದರಿಂದ ತೀವ್ರವಾಗಿ ನೊಂದ ಸತಿಯು ಯಜ್ಞಕುಂಡಕ್ಕೆ ಹಾರಿ ತನ್ನ ಯೋಗಾಗ್ನಿಯಿಂದ ದೇಹತ್ಯಾಗ ಮಾಡಿದಳು.

ಪತ್ನಿಯ ಅವಮಾನ ಮತ್ತು ಅಗಲಿಕೆಯಿಂದ ಕೋಪಗೊಂಡ ಶಿವನು ಯಜ್ಞವನ್ನು ಧ್ವಂಸ ಮಾಡಿದನು. ನಂತರ ಸತಿಯೇ ಪರ್ವತರಾಜ ಹಿಮಾಲಯನ ಪುತ್ರಿಯಾಗಿ ಶೈಲಪುತ್ರಿ ರೂಪದಲ್ಲಿ ಮರುಜನ್ಮ ತಾಳಿದಳು. ಬಳಿಕ ಶಿವನನ್ನೇ ಮತ್ತೊಮ್ಮೆ ವರಿಸಿದಳು ಎಂಬುದು ಪೌರಾಣಿಕ ನಂಬಿಕೆ.

ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಆರಾಧನೆಯ ಜೊತೆಗೆ ಯೋಗಸಾಧನೆ, ಧ್ಯಾನ ಮತ್ತು ಆತ್ಮಚಿಂತನೆಗೆ ವಿಶೇಷ ಮಹತ್ವವಿದೆ. ನವರಾತ್ರಿ ಸಂಪೂರ್ಣವಾಗಿ ದುರ್ಗಾಮಾತೆಯ ಆರಾಧನೆಗೆ ಸಮರ್ಪಿತವಾಗಿದ್ದರೂ, ತಿಥಿ ಮತ್ತು ವಾರಕ್ಕೆ ಅನುಗುಣವಾಗಿ ಇತರ ದೇವತೆಗಳನ್ನೂ ಪೂಜಿಸಬಹುದು. 

 

Exit mobile version