ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸ್ ದಾಳಿ: ಹೆದರಿ ಹೃದಯಾಘಾತದಿಂದ ವ್ಯಕ್ತಿ ಸಾ*ವು

ಪೊಲೀಸ್ ಠಾಣೆ ಎದುರು ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ!

Untitled design 2025 08 30t232921.111

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ನಡೆಸಿದ ದಾಳಿಯ ವೇಳೆ ದುರಂತವೊಂದು ಸಂಭವಿಸಿದೆ. ದಾಳಿಯ ಸಂದರ್ಭದಲ್ಲಿ ಹೆದರಿ ಹೃದಯಾಘಾತಕ್ಕೊಳಗಾದ 35 ವರ್ಷದ ಮಂಜು ಮಡಿವಾಳ ಎಂಬ ವ್ಯಕ್ತಿ ಕುಳಿತ ಜಾಗದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದ ಕುಪಿತರಾದ ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಹುಣಸಗಿ ಪೊಲೀಸ್ ಠಾಣೆಯ ಎದುರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ವಜ್ಜಲ್ ಗ್ರಾಮದ ಗುಡ್ಡದಲ್ಲಿ ರಾಜಾರೋಷವಾಗಿ ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಹುಣಸಗಿ ಪೊಲೀಸರು ದಾಳಿ ನಡೆಸಲು ತೆರಳಿದ್ದರು. ದಾಳಿಯ ವೇಳೆ, ಮಂಜು ಮಡಿವಾಳ ಎಂಬ ವ್ಯಕ್ತಿ ಭಯದಿಂದ ಕುಸಿದುಬಿದ್ದಿದ್ದಾರೆ. ಪೊಲೀಸರು ಆರೋಪಿಗಳನ್ನು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಅಟ್ಟಾಡಿಸಿದ್ದರಿಂದ ಮಂಜು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ನಂತರ, ಮೃತನ ಶವವನ್ನು ಪೊಲೀಸ್ ಠಾಣೆಯ ಎದುರು ಇರಿಸಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದ್ದಾರೆ.

ಮೃತನ ಪತ್ನಿ ಮತ್ತು ಕುಟುಂಬಸ್ಥರು, ಪೊಲೀಸರ ದಾಳಿಯ ಸಂದರ್ಭದಲ್ಲಿ ಅನಗತ್ಯವಾಗಿ ಅಟ್ಟಾಡಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ದೂರಿದ್ದಾರೆ. ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿರುವ ಅವರು, ಘಟನೆಯ ತನಿಖೆಗೆ ಆಗ್ರಹಿಸಿದ್ದಾರೆ.

ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಪೊಲೀಸರು ದಾಳಿಯ ಸಂದರ್ಭದಲ್ಲಿ ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಗ್ರಾಮಸ್ಥರ ಆಕ್ರೋಶ ಮತ್ತು ಪ್ರತಿಭಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Exit mobile version