ರೈಲ್ವೆ ಕಾಮಗಾರಿ ವೇಳೆ ಮಣ್ಣು ಕುಸಿತ: ಮಣ್ಣಿನಡಿ ಸಿಲುಕಿ ಟೆಕ್ನಿಷಿಯನ್ ಸಾ*ವು

ಗುರ್ಲಾಪುರದಲ್ಲಿ (1)

ಉತ್ತರ ಕನ್ನಡ: ಜಿಲ್ಲೆಯ ದಾಂಡೇಲಿಯಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ವೇಳೆ ಭೀಕರ ಅವಘಡ ಸಂಭವಿಸಿದ್ದು, ಮಣ್ಣು ಕುಸಿದು ರೈಲ್ವೆ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಹಿರಿಯ ಅಭಿಯಂತರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಕರ್ಕಾ ವೃತ್ತದಿಂದ ಬರ್ಚಿ ವೃತ್ತದ ನಡುವಿನ ಲೆವಲ್ ಕ್ರಾಸಿಂಗ್ ಗೇಟ್ ನಂಬರ್ 11ರಲ್ಲಿ ಈ ದುರ್ಘಟನೆ ನಡೆದಿದೆ.

ಮೃತರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡ ಗ್ರಾಮದ ನಿವಾಸಿ ಮಹೇಶ್ ತಳವಾರ (37) ಎಂದು ಗುರುತಿಸಲಾಗಿದೆ. ಇವರು ಧಾರವಾಡ ರೈಲ್ವೆ ವಿಭಾಗದ ಟೆಕ್ನಿಷಿಯನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಕಾಮಗಾರಿ ವೇಳೆ ರೈಲ್ವೆ ಬ್ಲಾಕ್‌ಗಳು ಸರಿಯಾಗಿ ಹೊಂದಿಕೆಯಾಗಿವೆಯೇ ಎಂಬುದನ್ನು ಪರಿಶೀಲಿಸಲು ಮಹೇಶ್ ತಳವಾರ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು, ಮಣ್ಣಿನ ಜೊತೆಗೆ ಸಿಮೆಂಟ್ ಬ್ಲಾಕ್‌ಗಳು ಅವರ ಹೊಟ್ಟೆಯ ಮೇಲೆ ಬಿದ್ದಿವೆ ಎನ್ನಲಾಗಿದೆ. ಭಾರೀ ಪ್ರಮಾಣದ ಮಣ್ಣು ಮತ್ತು ಬ್ಲಾಕ್‌ಗಳ ಅಡಿಯಲ್ಲಿ ಸಿಲುಕಿದ ಮಹೇಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಘಟನೆಯಲ್ಲಿ ಗದಗದ ರಾಜೀವ್ ಗಾಂಧಿ ನಗರದ ಹಿರಿಯ ಅಭಿಯಂತರ ಮಕ್ತುಮ್ ಮೊಹಮ್ಮದ್ ಹುಸೇನ್ ಮುಲ್ಲಾ (57) ಅವರಿಗೂ ಗಾಯಗಳಾಗಿವೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಏಕಾಏಕಿ ಮಣ್ಣು ಕುಸಿದಿದ್ದರಿಂದ ಕಾರ್ಮಿಕರು ಹಾಗೂ ಅಧಿಕಾರಿಗಳು ಆತಂಕಕ್ಕೊಳಗಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದಾಂಡೇಲಿ ಸಿಪಿಐ ಶಿವಾನಂದ ಅಂಬಿಗೇರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಧಾರವಾಡ ರೈಲ್ವೆ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ವೇಳೆ ಮಣ್ಣು ಕುಸಿಯಲು ನಿಖರ ಕಾರಣವೇನು? ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.

ರೈಲ್ವೆ ಕೆಳಸೇತುವೆ ಕಾಮಗಾರಿ ವೇಳೆ ಸಂಭವಿಸಿದ ಈ ದುರಂತದಿಂದ ಕಾರ್ಮಿಕರ ಸುರಕ್ಷತೆ ಹಾಗೂ ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಮೂಡಿವೆ. ಮೃತ ಮಹೇಶ್ ತಳವಾರ ಅವರ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ

Exit mobile version