ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಬಿಜೆಪಿಯವರು ಬೆಂಕಿ ಹಚ್ಚಬೇಡಿ–ದಿನೇಶ್ ಗುಂಡೂರಾವ್

02 (14)

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ, ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಲಾಭಕ್ಕಾಗಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, “ಸುಹಾಸ್ ಶೆಟ್ಟಿಯ ಕೊಲೆ ಆಘಾತಕಾರಿ ಘಟನೆ. ಕೆಲ ದಿನಗಳ ಹಿಂದೆ ಅಶ್ರಫ್ ಎಂಬಾತನ ಕೊಲೆಯಾಗಿತ್ತು. ಈಗ ಸುಹಾಸ್ ಶೆಟ್ಟಿಯ ಕೊಲೆಯಿಂದ ಎಲ್ಲರಿಗೂ ಆಘಾತವಾಗಿದೆ. ಇದೊಂದು ದುರಂತ. ನಮ್ಮ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ಜವಾಬ್ದಾರಿಯಿಂದ ಕೆಲಸ ಮಾಡುವ ವಿಶ್ವಾಸವಿದೆ,” ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, “ಪ್ರಚೋದನಕಾರಿ ಹೇಳಿಕೆಗಳಿಂದ ದ್ವೇಷ ಹೆಚ್ಚಿಸುವ ಕೆಲಸವಾಗಬಾರದು. ಶಾಂತಿ ಮತ್ತು ಸೌಹಾರ್ದತೆ ಸ್ಥಾಪನೆಯಾಗಬೇಕು. ಕೊಲೆಗಾರರನ್ನು ಬಂಧಿಸುವುದು ನಮ್ಮ ಮೊದಲ ಆದ್ಯತೆ. ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಯಾವುದೇ ಹಸ್ತಕ್ಷೇಪವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು,” ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತದೆ ಎಂಬ ಬಿಜೆಪಿಯ ಆರೋಪಕ್ಕೆ ಕಿಡಿಕಾರಿದ ಗುಂಡೂರಾವ್, ಕೊಲೆಯಾದದ್ದು ನೋವಿನ ಸಂಗತಿ. ಅಶ್ರಫ್ ಕೊಲೆಯಾದಾಗ ಬಿಜೆಪಿಯವರು ಏಕೆ ಮಾತನಾಡಲಿಲ್ಲ? ಮನುಷ್ಯರೆಲ್ಲರೂ ಒಂದೇ. ಇಂತಹ ಹೇಳಿಕೆಗಳಿಂದ ಬಿಜೆಪಿ ತಪ್ಪಿನ ಹೆಜ್ಜೆ ಇಡುತ್ತಿದೆ. ಯಾರೇ ಕೊಲೆಯಾದರೂ ಖಂಡಿಸಬೇಕು.

ಒಗ್ಗಟ್ಟಿನಿಂದ ಎದುರಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ಮುಂದೆ ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಬಿಜೆಪಿಯವರು ಜವಾಬ್ದಾರಿಯಿಂದ ಮಾತನಾಡಬೇಕು. ಬೆಂಕಿ ಹಚ್ಚುವ ಕೆಲಸ ಬಿಡಿ, ಬೆಂಕಿ ಆರಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ನಾಳೆ ಮಂಗಳೂರಿಗೆ ಭೇಟಿ ನೀಡುವುದಾಗಿ ತಿಳಿಸಿದ ಅವರು, ಗೃಹ ಸಚಿವರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Exit mobile version