ಶಿವಮೊಗ್ಗದಲ್ಲಿ ಗಣೇಶ ಹಬ್ಬಕ್ಕೆ ಬಿಗಿ ರೂಲ್ಸ್: ಡಿಜೆ, ಬೈಕ್ ರ‍್ಯಾಲಿಗೆ ಬ್ರೇಕ್!

Untitled design (76)

ಶಿವಮೊಗ್ಗ ಸೆ.11: ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಹಾಗೂ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹಲವು ಚಟುವಟಿಕೆಗಳಿಗೆ ನಿಷೇಧ ಹೇರಿದ್ದಾರೆ.

30 ದಿನಗಳ ಕಾಲ ಈ ನಿಷೇಧಾಜ್ಞೆ ಜಾರಿ

ಸೆಪ್ಟೆಂಬರ್ 14ರಿಂದ ಅಕ್ಟೋಬರ್ 13ರವರೆಗೆ ಒಟ್ಟು 30 ದಿನಗಳ ಕಾಲ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಹಬ್ಬದ ಆಚರಣೆ ಹಾಗೂ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸಿಸ್ಟಂ ಬಳಕೆ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಸಿಡಿಸುವುದು ಮತ್ತು ಬೈಕ್ ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ.

ಹಬ್ಬದ ವೇಳೆ ಹೆಚ್ಚಿನ ಶಬ್ದ ಹಾಗೂ ಸಿಡಿಮದ್ದುಗಳಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಮೆರವಣಿಗೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 35 ಮತ್ತು 36ರ ಅಡಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಮುಕ್ತಾಯಗೊಳ್ಳುವವರೆಗೆ ಜಿಲ್ಲೆಯಲ್ಲಿ ಈ ನಿಯಮಗಳು ಜಾರಿಯಲ್ಲಿರಲಿವೆ.

ಇದರ ಜೊತೆಗೆ ಗಣೇಶ ಮೂರ್ತಿಗಳನ್ನು ತೆಪ್ಪದ ಮೂಲಕ ವಿಸರ್ಜನೆ ಮಾಡುವುದಕ್ಕೂ ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ. ತೆಪ್ಪದಲ್ಲಿ ಒಂದೇ ಸಮಯದಲ್ಲಿ ಕೇವಲ 2ರಿಂದ 3 ಜನರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ತೆಪ್ಪದಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜ್ಯಾಕೆಟ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ನುರಿತ ಈಜುಗಾರರ ಸಮಕ್ಷಮದಲ್ಲಿಯೇ ವಿಸರ್ಜನಾ ಪ್ರಕ್ರಿಯೆ ನಡೆಸಬೇಕು. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಭಕ್ತರಿಗೆ ಆಚರಣೆಗೆ ಅವಕಾಶ ನೀಡುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Exit mobile version