ಶಿವಮೊಗ್ಗ: ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ಹಾಗೂ ಡಿಜೆ ಸಿಸ್ಟಮ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಇಂದಿನಿಂದ ಆಗಸ್ಟ್ 28ರವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಿಷೇಧ
ಡಿಜೆ ಸಿಸ್ಟಮ್ ಬಳಕೆ ಬ್ಯಾನ್, ಸಿಡಿಮದ್ದು ಬಳಕೆಗೆ ನಿಷೇಧ
ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ
ಶಿವಮೊಗ್ಗ ಜಿಲ್ಲೆಯಾದ್ಯಂತ ಈದ್ ಮಿಲಾದ್ ಪ್ರಯುಕ್ತ ನಡೆಯಬಹುದಾದ ಬೈಕ್ ರ್ಯಾಲಿಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಸಿಸ್ಟಮ್ ಬಳಕೆಯನ್ನೂ ನಿಷೇಧಿಸಲಾಗಿದೆ. ಡಿಜೆ ಸೌಂಡ್‌ನಿಂದ ಉಂಟಾಗುವ ಶಬ್ಧ ಮಾಲಿನ್ಯದಿಂದ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಬಳಕೆಯ ಮೇಲೆ ಕೂಡಾ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸಿಡಿಮದ್ದು ಸಿಡಿಸುವುದರಿಂದ ಪ್ರಾರ್ಥನಾ ಸ್ಥಳಗಳು ಹಾಗೂ ಇತರ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಮತ್ತೊಂದೆಡೆ, ಕಲರ್ ಪೇಪರ್ ಬ್ಲಾಸ್ಟಿಂಗ್‌ನಿಂದ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯನ್ನೂ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.
ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಪ್ರಮುಖ ಉದ್ದೇಶವಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸಾರ್ವಜನಿಕರು ಹಾಗೂ ಸಂಘಟಕರು ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಒಮದು ವೇಳೆ ಈ ಆದೇಶ ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸುವುದು, ಡಿಜೆ ಸಿಸ್ಟಮ್ ಬಳಸುವುದು, ಸಿಡಿಮದ್ದು ಸಿಡಿಸುವುದು ಅಥವಾ ಕಲರ್ ಪೇಪರ್ ಬ್ಲಾಸ್ಟಿಂಗ್ ನಡೆಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈದ್ ಮಿಲಾದ್ ಆಚರಣೆಯನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಕೊಂಡಿದೆ.
