ರಾಯಚೂರಿನಲ್ಲಿ ಮೃತದೇಹಗಳ ಮಾರಾಟದ ಆರೋಪ: ಮೂವರು ಪೊಲೀಸರ ವಶಕ್ಕೆ!

Untitled design (3)

ರಾಯಚೂರು: ಸ್ಮಶಾನದಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಹೊರತೆಗೆದು ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ರಾಯಚೂರು ನಗರದಲ್ಲಿ ಬೆಳಕಿಗೆ ಬಂದಿದೆ. ನಗರದ ಮಂತ್ರಾಲಯ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಬುರುಡೆಗಳು ಹಾಗೂ ಅಸ್ಥಿಪಂಜರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ನೇತಾಜಿನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತದೇಹಗಳನ್ನು ಅವುಗಳ ಸ್ಥಿತಿಗೆ ಅನುಗುಣವಾಗಿ ಬೇರೆ ಬೇರೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಹೊಸದಾಗಿ ಹೂಳಲಾದ ಮೃತದೇಹಗಳಿಗೆ ಒಂದು ಬೆಲೆ, ಐದಾರು ತಿಂಗಳ ಹಿಂದಿನ ಮೃತದೇಹಗಳಿಗೆ ಮತ್ತೊಂದು ಬೆಲೆ ನಿಗದಿಪಡಿಸಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ದಂಧೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೃತದೇಹಗಳಿಲ್ಲದೆ ಅಂತ್ಯಕ್ರಿಯೆ ಸ್ಥಳದಲ್ಲಿ ಪೂಜೆ?

ಸ್ಮಶಾನದಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಹೊರತೆಗೆದು, ಬಳಿಕ ಮತ್ತೆ ಮಣ್ಣು ಮುಚ್ಚಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಕೆಲವು ಮೃತರ ಕುಟುಂಬಗಳಿಗೆ ತಮ್ಮ ಸಂಬಂಧಿಕರ ಮೃತದೇಹಗಳು ಸಮಾಧಿಯೊಳಗೆ ಇಲ್ಲ ಎಂಬ ವಿಷಯವೇ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಸಂಗತಿ ಕುಟುಂಬಗಳ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಸ್ಮಶಾನದ ಸುತ್ತಮುತ್ತ ಕೆಲವೊಮ್ಮೆ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಸ್ಮಶಾನದಲ್ಲಿ ಬುರುಡೆಗಳು ಮತ್ತು ಅಸ್ಥಿಪಂಜರಗಳು ಕಂಡುಬಂದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತ್ಮಗಳಿಗೂ ಶಾಂತಿ ಸಿಗದ ರೀತಿ ಮೃತದೇಹಗಳ ಮಾರಾಟವಾಗಿದೆ. ಈ ಹಿನ್ನೆಲೆ ದೆವ್ವ-ಭೂತಗಳಿವೆ ಅನ್ನೋ ಗಾಳಿ ಸುದ್ದಿ ಹರಡಿದ್ದು ಈ ಕುರಿತಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೂವರು ಶಂಕಿತರು ಪೊಲೀಸರ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಶಾನದ ಸಹಾಯಕ ವಿರೇಶ್ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಾಜು ಮತ್ತು ಅಪ್ಸರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ವಿರೇಶ್ ಜೊತೆ ರಾಜು ಮತ್ತು ಅಪ್ಸರ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2,000ಕ್ಕೂ ಅಧಿಕ ಮೃತದೇಹಗಳ ವಿಲೇವಾರಿ?

ಸ್ಮಶಾನದ ಸಹಾಯಕ ವಿರೇಶ್ ಅವರು ಸುಮಾರು 2,000ಕ್ಕೂ ಅಧಿಕ ಮೃತದೇಹಗಳ ವಿಲೇವಾರಿ ಮಾಡಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಸ್ಮಶಾನದಿಂದ ಮೃತದೇಹಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದು, ಹಳೆಯ ಮೃತದೇಹಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿ ನೈಜ ಸಂಗತಿಗಳನ್ನು ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ರಾಯಚೂರಿನ ಈ ಪ್ರಕರಣ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತದೇಹಗಳ ಕಳ್ಳತನ ಮತ್ತು ಮಾರಾಟದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಬಹಿರಂಗವಾಗಬೇಕಿದ್ದು, ತಪ್ಪಿತಸ್ಥರು ಪತ್ತೆಯಾದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Exit mobile version