ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಾಗಕಲ್ಲು ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. 45 ದಿನದ ಗಂಡು ಮಗುವನ್ನು ತಾಯಿಯಾದ ರಾಧೆಯೇ ಕೊಲೆ ಮಾಡಿದ್ದಾಳೆ. ಬಡತನ ಮತ್ತು ಪತಿಯ ಕುಡಿತದ ಚಟದಿಂದ ಬೇಸತ್ತು, ಮಗುವಿನ ಆರೈಕೆಗೆ ಸಾಧ್ಯವಾಗದ ಕಾರಣದಿಂದ ರಾಧೆ ತಡರಾತ್ರಿ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಈ ಘಟನೆಯ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಧೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪವನ್ ಮತ್ತು ರಾಧೆ ದಂಪತಿಗಳು ನಾಗಕಲ್ಲು ಗ್ರಾಮದ ನಿವಾಸಿಗಳು. ಪವನ್ ಕುಡಿತದ ಚಟಕ್ಕೆ ಒಳಗಾಗಿದ್ದು, ಮನೆಯ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಧೆಗೆ ಆರ್ಥಿಕ ಕಷ್ಟ ಮತ್ತು ಮಗುವಿನ ಆರೈಕೆಯ ಒತ್ತಡ ತಡೆಯಲಾರದಾಯಿತು, ಇದು ಈ ದಾರುಣ ಕೃತ್ಯಕ್ಕೆ ಕಾರಣವಾಯಿತು.
ದೇವನಹಳ್ಳಿಯಲ್ಲಿ ಟಿಪ್ಪರ್ ಅಪಘಾತ
ದೇವನಹಳ್ಳಿ ಹೊರವಲಯದ ಏರ್‌ಪೋರ್ಟ್ ರಸ್ತೆಯ ಭುವನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ವೊಂದು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಬೈಕ್‌ನಲ್ಲಿದ್ದವರು ಅಪಾಯದಿಂದ ಪಾರಾದರೆ, ಮತ್ತೊಂದು ಬೈಕ್‌ನ ಸವಾರ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಗುರುತು ಇನ್ನೂ ದೃಢಪಡಿಸಲಾಗಿಲ್ಲ. ಈ ಘಟನೆಯಲ್ಲಿ ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸವನಬಾಗೇವಾಡಿಯಲ್ಲಿ ಬೈಕ್ ಅಪಘಾತ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಸ್ತೆಯ ಮಧ್ಯದ ಡಿವೈಡರ್‌ಗೆ ಬೈಕ್ ಡಿಕ್ಕಿಯಾದ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರ ವಿರೇಶ ಹಿರೇಮಠ (19) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿಯ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವೇಗವಾಗಿ ಬೈಕ್ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬಸವನಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.