ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಪ್ರಕರಣ: ಕನ್ನಡಿಗರಿಗೆ ಕೈ ಮುಗಿದು ಕ್ಷಮೆ ಕೇಳಿದ ನೇಹಾ ಬಿಸ್ವಾಲ್!

ಕನ್ನಡಿಗರ ಆಕ್ರೋಶಕ್ಕೆ ಮಣಿದ ಯುವತಿ: ಕರ್ನಾಟಕಕ್ಕೆ ಕ್ಷಮೆಯಾಚಿಸಿದ ನೇಹಾ ಬಿಸ್ವಾಲ್!

Untitled design (36)

ಬೆಂಗಳೂರು: ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ ಇತ್ತೀಚೆಗೆ ಬೆಂಗಳೂರಿನ ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ  ಟೀಕೆಗೆ ಒಳಗಾಗಿದ್ದಳು. ಆಕೆಯ ವಿಡಿಯೋದಲ್ಲಿ, ಮಳೆಯ ಸಂದರ್ಭದಲ್ಲಿ ಚಾಲಕನೊಬ್ಬ ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ ರಸ್ತೆಯ ನೀರು ಆಕೆಯ ಬಟ್ಟೆಗೆ ಹಾರಿತ್ತು. ಇದರಿಂದ ಕೋಪಗೊಂಡ ನೇಹಾ, “ಬೆಂಗಳೂರಿನವರಿಗೆ ಬುದ್ಧಿಯಿಲ್ಲ, ಜೋರಾಗಿ ಮಳೆ ಬಂದರೂ ವಾಹನವನ್ನು ವೇಗವಾಗಿ ಚಲಾಯಿಸುತ್ತಾರೆ, ಇಲ್ಲಿನ ಜನ ಅನಕ್ಷರಸ್ಥರಂತೆ ವರ್ತಿಸುತ್ತಾರೆ” ಎಂದು ಆವೇಶದಲ್ಲಿ ಹೇಳಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಕನ್ನಡಿಗರಿಂದ ತೀವ್ರ ಟೀಕೆಗೆ ಗುರಿಯಾಯಿತು.

ಕನ್ನಡಿಗರ ಆಕ್ರೋಶದ ನಂತರ, ನೇಹಾ ಬಿಸ್ವಾಲ್ ಇದೀಗ ಮತ್ತೊಂದು ವಿಡಿಯೋದ ಮೂಲಕ ಕ್ಷಮೆಯಾಚಿಸಿದ್ದಾಳೆ. ಆಕೆ ತನ್ನ ಆವೇಶದ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿ, ಬೆಂಗಳೂರಿನ ಬಗ್ಗೆ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. “ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ, ಇದು ನನಗೆ ಕೆಲಸ ಮತ್ತು ಜೀವನೋಪಾಯವನ್ನು ನೀಡಿರುವ ಊರು. ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಒಳಿತು,” ಎಂದು ಆಕೆ ಹೇಳಿದ್ದಾಳೆ.

ನೇಹಾ ಬಿಸ್ವಾಲ್‌ ಹೇಳಿದ್ದೇನು?

ನೇಹಾ ತನ್ನ ಕ್ಷಮೆಯಾಚನೆಯಲ್ಲಿ, “ಬೆಂಗಳೂರಿನ ಜನರಿಂದ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಜೋರಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತಿರುವಾಗ ವಾಹನಗಳನ್ನು ನಿಧಾನವಾಗಿ ಚಲಾಯಿಸಿದರೆ ಒಳಿತು. ನೀರು ನನ್ನ ಬಟ್ಟೆಗೆ ಬಿದ್ದರೆ ನಾನು ಬೇರೆ ಬಟ್ಟೆ ಬದಲಾಯಿಸಬಹುದು. ಆದರೆ, ರಸ್ತೆ ಬದಿಯಲ್ಲಿ ಬಡವರು, ರಾತ್ರಿ ರಸ್ತೆಯಲ್ಲಿ ಮಲಗಿರುವವರಿಗೆ ಇದರಿಂದ ತೊಂದರೆಯಾಗಬಹುದು,” ಎಂದು ಸಲಹೆ ನೀಡಿದ್ದಾಳೆ. ತನ್ನ ಮಾತುಗಳಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುವುದಾಗಿ ಆಕೆ ತಿಳಿಸಿದ್ದಾಳೆ.

Exit mobile version