ಮೈಸೂರು: ಕನ್ನಡ ಪತ್ರಿಕೋದ್ಯಮದ ಭೀಷ್ಮ ಎಂದೇ ಕರೆಯಲ್ಪಡುವ, ಐದು ದಶಕಗಳ ಕಾಲ ಸುದ್ದಿಗಾರರಾಗಿ ಮತ್ತು ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ (74) ಅವರು ಬುಧವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಹಾಗೂ ಪತ್ರಿಕೋದ್ಯಮದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ, ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯನ ಅಗಲಿಕೆಗೆ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಭಾವನಾತ್ಮಕವಾಗಿ ಕಂಬನಿ ಮಿಡಿದಿದ್ದಾರೆ.
ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಕಾಲದಿಂದಲೂ ಕೆ.ಜೆ. ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ರಜನಿಕಾಂತ್ ಅವರ ಆರಂಭಿಕ ದಿನಗಳಲ್ಲಿ ಕುಮಾರ್ ಅವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲವನ್ನು ರಜನಿ ಎಂದಿಗೂ ಮರೆತಿಲ್ಲ. ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಭಾವುಕರಾದ ರಜನಿಕಾಂತ್, ಕನ್ನಡದಲ್ಲಿಯೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ, ದಿವಂಗತ ಕೆ. ಜೆ. ಕುಮಾರ್ ಅವರು ನನ್ನ ಆತ್ಮೀಯ ಸ್ನೇಹಿತರು. ಆರಂಭಕಾಲದಿಂದಲೂ ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರು. ಬಹಳ ಸರಳವಾಗಿ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆಯಲ್ಲಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟುಮಾಡಿದೆ. ಅವರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಎಂದು ಬರೆದುಕೋಮಡಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾ ಲೋಕದ ಶಕ್ತಿಯಾಗಿದ್ದ ಕೆ. ಜೆ. ಕುಮಾರ್ ಅವರ ವೃತ್ತಿ ಬದುಕು ರೋಚಕವಾಗಿದೆ. ಮೂಲತಃ ಉಡುಪಿಯ ಕೊರಂಗ್ರಪಾಡಿಯವರಾದ ಇವರು, ರಘುರಾಮ್ ಶೆಟ್ಟಿ ಮತ್ತು ಶಾರದಾ ದಂಪತಿಯ ಪುತ್ರನಾಗಿ 1952ರ ನವೆಂಬರ್ 6 ರಂದು ಜನಿಸಿದರು. 1969ರಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಇವರು, ಸತತ 56 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ತಮ್ಮ ಸೋದರ ಮಾವ ಎ. ರಾಮಣ್ಣ ಅವರ ಸಂಪಾದಕತ್ವದ ‘ವಿಜಯ’ ದಿನಪತ್ರಿಕೆಯ ಮೂಲಕ ವೃತ್ತಿ ಬದುಕು ಆರಂಭಿಸಿದ ಕುಮಾರ್, ನಂತರ ಮೈಸೂರಿನಲ್ಲಿ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಸುದ್ದಿಗಾರರಾಗಿ ಹೆಸರು ಮಾಡಿದರು. ಮೈಸೂರಿನ ಪ್ರತಿಯೊಂದು ಪ್ರಮುಖ ವಿದ್ಯಮಾನಗಳಿಗೂ ಸಾಕ್ಷಿಯಾಗಿದ್ದ ಇವರು, ಪತ್ರಿಕಾ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೆ.ಜೆ. ಕುಮಾರ್ ಕೇವಲ ರಜನಿಕಾಂತ್ ಅವರಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗದ ಅತಿರಥ ಮಹಾರಥರಿಗೂ ಆಪ್ತರಾಗಿದ್ದರು. ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್ ಅವರಂತಹ ನಟರೊಂದಿಗೆ ಇವರು ಗಾಢ ಬಾಂಧವ್ಯ ಹೊಂದಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ನಿರ್ಮಾಪಕ ದ್ವಾರಕೀಶ್ ಮುಂತಾದವರೊಂದಿಗೆ ಇವರು ಸಿನಿಮಾ ಮತ್ತು ಸಾಹಿತ್ಯದ ಬಗ್ಗೆ ಚರ್ಚಿಸುತ್ತಿದ್ದರು.
ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿತ್ವ ಇವರದ್ದಾಗಿತ್ತು. ಮೈಸೂರಿಗೆ ಯಾರೇ ದೊಡ್ಡ ನಟರು ಬಂದರೂ ಒಮ್ಮೆ ಕುಮಾರ್ ಅವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿ. ಅವರ ಅಗಲಿಕೆಯಿಂದಾಗಿ ಹಳೆಯ ತಲೆಮಾರಿನ ಪತ್ರಿಕೋದ್ಯಮ ಮತ್ತು ಚಿತ್ರರಂಗದ ನಡುವಿನ ಒಂದು ಮಹತ್ವದ ಕೊಂಡಿ ಕಳಚಿದಂತಾಗಿದೆ. ಅವರ ನಿಧನಕ್ಕೆ ಮೈಸೂರಿನ ಪತ್ರಕರ್ತರ ಸಂಘ ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
