ಮೈಸೂರು (ಆಗಸ್ಟ್ 01): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ–‘ವಿವೇಕ ಸ್ಮಾರಕ’ ವನ್ನು ಉದ್ಘಾಟಿಸಿದರು. ಈ ವೇಳೆ ಪ್ರಧಾನಿ, “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಭಾಷಣದ ಆರಂಭದಲ್ಲೇ ತಾಯಿ ಚಾಮುಂಡೇಶ್ವರಿಗೆ ಪ್ರಣಾಮ ಸಲ್ಲಿಸಿದ ಪ್ರಧಾನಿ, ಮೈಸೂರನ್ನು ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹೆಮ್ಮೆಯ ಕೇಂದ್ರ ಎಂದು ಬಣ್ಣಿಸಿದರು. “ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಮತ್ತು ಪರಂಪರೆ ಹಾಸುಹೊಕ್ಕಿದೆ. ದಸರಾ, ಸಂಗೀತ, ಸಾಹಿತ್ಯ, ಅರಮನೆ ಮತ್ತು ಇಲ್ಲಿನ ಸಂಸ್ಕೃತಿ ಇಡೀ ದೇಶದ ಗಮನ ಸೆಳೆಯುತ್ತದೆ” ಎಂದು ಹೇಳಿದರು.
ರಾಮಕೃಷ್ಣ ಆಶ್ರಮದೊಂದಿಗೆ ತಮ್ಮ ಜೀವನದ ಬಾಂಧವ್ಯವನ್ನು ನೆನಪಿಸಿಕೊಂಡ ಮೋದಿ, ತಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಆಶ್ರಮದ ಪ್ರಭಾವ ಮಹತ್ತರವಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರಿನ ಪಾತ್ರವನ್ನು ಸ್ಮರಿಸಿದ ಅವರು, ಆಗಿನ ಮೈಸೂರು ಮಹಾರಾಜರು ವಿವೇಕಾನಂದರನ್ನು ಪ್ರೋತ್ಸಾಹಿಸಿ ವಿಶ್ವ ವೇದಿಕೆಯಲ್ಲಿ ಅವರ ಚಿಂತನೆಗಳಿಗೆ ಬೆಂಬಲ ನೀಡಿದ ವಿಚಾರವನ್ನು ಉಲ್ಲೇಖಿಸಿದರು.
“ಸ್ವಾಮಿ ವಿವೇಕಾನಂದರು ಭಾರತದ ಯುವಜನತೆಗೆ ಶಾಶ್ವತ ಪ್ರೇರಣೆ. ರಾಷ್ಟ್ರವೇ ಪ್ರಥಮ ಎಂಬ ಚಿಂತನೆಯೊಂದಿಗೆ ಯುವಕರು ದೇಶ ನಿರ್ಮಾಣದಲ್ಲಿ ಮುನ್ನಡೆಯಬೇಕು. ವಿವೇಕ ಸ್ಮಾರಕವು ಸಾಧಕರು, ಭಕ್ತರು ಮತ್ತು ಯುವಜನತೆಗೆ ಆಧ್ಯಾತ್ಮಿಕ ಪ್ರೇರಣೆಯ ಕೇಂದ್ರವಾಗಲಿದೆ” ಎಂದು ಪ್ರಧಾನಿ ಹೇಳಿದರು.
ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ ಎಂದು ತಿಳಿಸಿದ ಮೋದಿ, ಹೊಸ ವಿಶ್ವವಿದ್ಯಾಲಯಗಳು, ಐಐಟಿ, ಐಐಎಂ, ವೈದ್ಯಕೀಯ ಕಾಲೇಜುಗಳು ಮತ್ತು ಐಟಿಐಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದರು. ಎಂಬಿಬಿಎಸ್ ಸೀಟುಗಳು ಸುಮಾರು 1.40 ಲಕ್ಷಕ್ಕೆ ಹೆಚ್ಚಳವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಯುವಜನರನ್ನು 21ನೇ ಶತಮಾನದ ಸವಾಲುಗಳಿಗೆ ಸಜ್ಜುಗೊಳಿಸುತ್ತಿದೆ ಎಂದು ವಿವರಿಸಿದರು.
ಭಾರತದ ಆರ್ಥಿಕ ಬೆಳವಣಿಗೆಗೆ ಯುವಜನರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ ಅವರು, ಮೊಬೈಲ್ ಉತ್ಪಾದನೆ, ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತೀಯ ಯುವಕರು ವಿಶ್ವಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಮಕೃಷ್ಣ ಮಠ ಮತ್ತು ಮಿಷನ್ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್, ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ, ಸಂಸದ ಯದುವೀರ್ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.