ಮೈಸೂರು: ಮೈಸೂರಿನಲ್ಲಿ ಮತ್ತೊಂದು ಅಂತರರಾಜ್ಯ ಮಾದಕ ವಸ್ತು ಜಾಲ ಪತ್ತೆಯಾಗಿದೆ. ನಂಜನಗೂಡಿನ ಬಾಳೆ ತೋಟವೊಂದರ ಮರೆಯಲ್ಲಿ ಯಾರಿಗೂ ಅನುಮಾನ ಬಾರದಂತೆ MDMA ಮಾದಕ ವಸ್ತು ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಆಲುವಾ ಪೊಲೀಸರ ಈ ಕಾರ್ಯಾಚರಣೆಯಿಂದ ಅಕ್ರಮ ಡ್ರಗ್ಸ್ ಜಾಲದ ಕರಾಳ ಮುಖ ಬಯಲಾಗಿದೆ.
ಬಂಧಿತ ಆರೋಪಿಯನ್ನು 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ ಬಾಯ್ ಎಂದು ಗುರುತಿಸಲಾಗಿದೆ. ಮೂಲತಃ ಕೇರಳದವನಾದ ಧನೇಶ್ ಹಲವು ವರ್ಷಗಳಿಂದ ನಂಜನಗೂಡಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಜಮೀನೊಂದನ್ನು ಬಾಡಿಗೆಗೆ ಪಡೆದು ಬಾಳೆ ಕೃಷಿ ಮಾಡುತ್ತಿದ್ದ ಆರೋಪಿ, ಇದೇ ತೋಟದ ಮರೆಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಬಾಳೆ ತೋಟದ ಮರೆಯಲ್ಲಿ MDMA ದಂಧೆ!
ಆರೋಪಿ ಧನೇಶ್ ಬಾಳೆ ಬೆಳೆ ಬೆಳೆಯುವ ನೆಪದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಅಂತರರಾಜ್ಯ ಮಟ್ಟದಲ್ಲಿ MDMA ಮಾದಕ ವಸ್ತು ಸಾಗಾಟ ಮಾಡುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆರೋಪವೂ ಇದೆ. ಈ ಬಗ್ಗೆ ಮಾಹಿತಿ ಪಡೆದ ಕೇರಳದ ಆಲುವಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರು ಪೊಲೀಸರಿಗೆ ಮಾಹಿತಿ ಇರಲಿಲ್ಲವೇ?
ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದ್ದಿದೆ. ಕೇರಳ ಪೊಲೀಸರು ನಂಜನಗೂಡಿಗೆ ಬಂದು ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವವರೆಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ ಎಂಬ ಚರ್ಚೆ ಶುರುವಾಗಿದೆ. ಕೇರಳ ಪೊಲೀಸರ ಕಾರ್ಯಾಚರಣೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಮೈಸೂರು ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಾಲವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿದ್ದ ಪ್ರಕರಣವೂ ಚರ್ಚೆಗೆ ಬಂದಿತ್ತು. ಇದೀಗ ಮತ್ತೊಮ್ಮೆ ಹೊರರಾಜ್ಯದ ಪೊಲೀಸರ ಕಾರ್ಯಾಚರಣೆಯಿಂದ ಅಂತರರಾಜ್ಯ ಡ್ರಗ್ಸ್ ಜಾಲ ಬಯಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಹೆಚ್ಚಾಗುತ್ತಿದೆಯೇ ಡ್ರಗ್ಸ್ ಜಾಲ?
ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮಾದಕ ವಸ್ತು ದಂಧೆಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆ ಮೂಡಿದೆ. ಹೊರರಾಜ್ಯದ ಪೊಲೀಸರಿಗೆ ಸಿಗುತ್ತಿರುವ ಡ್ರಗ್ಸ್ ಜಾಲದ ಸುಳಿವು ಸ್ಥಳೀಯ ಪೊಲೀಸರಿಗೆ ಏಕೆ ಸಿಗುತ್ತಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.
ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರಿಗೆ ಮೊದಲೇ ಮಾಹಿತಿ ಇತ್ತೇ ಅಥವಾ ಕಾರ್ಯಾಚರಣೆಯ ಬಗ್ಗೆ ಅವರಿಗೆ ತಿಳಿಸಲಾಗಿತ್ತೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಪ್ರಕರಣದ ಸಂಪೂರ್ಣ ತನಿಖೆಯಿಂದ ಡ್ರಗ್ಸ್ ಜಾಲದ ಹಿಂದೆ ಇರುವ ಇತರ ಆರೋಪಿಗಳು ಹಾಗೂ ಸಂಪರ್ಕ ಜಾಲದ ಮಾಹಿತಿ ಹೊರಬರಬೇಕಿದೆ.
