ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಇಂದು ಜಗತ್ಪ್ರಸಿದ್ಧ ‘ವೈರಮುಡಿ ಬ್ರಹ್ಮೋತ್ಸವ’ ಜರುಗಲಿದೆ. ವೈಷ್ಣವ ಪರಂಪರೆಯ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾದ ಈ ದಿನ, ಸಾಕ್ಷಾತ್ ಭಗವಂತನೇ ಧರೆಗಿಳಿದು ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ರತ್ನಖಚಿತ ವೈರಮುಡಿ ಕಿರೀಟಧಾರಿ ಶ್ರೀ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತ ಲಕ್ಷಾಂತರ ಭಕ್ತರು ಈಗಾಗಲೇ ಮೇಲುಕೋಟೆಗೆ ಆಗಮಿಸುತ್ತಿದ್ದಾರೆ.
ಖಜಾನೆಯಿಂದ ಕಿರೀಟದ ಪಯಣ
ಇಂದು ಮುಂಜಾನೆ 7:30ಕ್ಕೆ ಮಂಡ್ಯ ಜಿಲ್ಲಾ ಖಜಾನೆಯಿಂದ ವಜ್ರ ಹಾಗೂ ರತ್ನಖಚಿತ ವೈರಮುಡಿ ಆಭರಣಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹೊರತರಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ದೇವಾಲಯದ ಅರ್ಚಕರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ, ಆಭರಣಗಳನ್ನು ಹೊತ್ತ ವಾಹನವು ಮೇಲುಕೋಟೆಯತ್ತ ಪ್ರಯಾಣ ಬೆಳೆಸಿದೆ. ಮೊದಲು ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲು, ಪಾಂಡವಪುರ ಮತ್ತು ಜಕ್ಕನಹಳ್ಳಿ ಮಾರ್ಗವಾಗಿ ಸಾಗುತ್ತಿದೆ.
ಮೇಲುಕೋಟೆಗೆ ತಲುಪುವ ಮಾರ್ಗಮಧ್ಯದ ಪ್ರತಿಯೊಂದು ಗ್ರಾಮಗಳಲ್ಲೂ ವೈರಮುಡಿ ಕಿರೀಟಕ್ಕೆ ಸಾರ್ವಜನಿಕ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ರಸ್ತೆಯ ಬದಿಯಲ್ಲಿ ನಿಂತು ತಮ್ಮ ಆರಾಧ್ಯ ದೈವದ ಕಿರೀಟಕ್ಕೆ ಸ್ವಾಪೂಜೆ ಸಲ್ಲಿಸಿದ್ದಾರೆ. ಸಂಜೆ ವೇಳೆಗೆ ಈ ಆಭರಣಗಳ ಪೆಟ್ಟಿಗೆಯು ಮೇಲುಕೋಟೆಯ ಬೆಟ್ಟವನ್ನು ತಲುಪಲಿದ್ದು, ಅಲ್ಲಿ ಸಂಪ್ರದಾಯಬದ್ಧವಾಗಿ ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಲಿದೆ.
ವೈರಮುಡಿ ಉತ್ಸವದ ವಿಶೇಷತೆ
ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಪುಷ್ಯ ನಕ್ಷತ್ರದ ಸುಮುಹೂರ್ತದಲ್ಲಿ ಬ್ರಹ್ಮೋತ್ಸವಕ್ಕೆ ಚಾಲನೆ ಸಿಗಲಿದೆ. ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಶ್ರೀದೇವಿ ಮತ್ತು ಭೂದೇವಿಯರ ಸಮ್ಮುಖದಲ್ಲಿ ವೈರಮುಡಿ ಕಿರೀಟಧಾರಣೆ ಮಾಡಲಾಗುತ್ತದೆ. ರತ್ನಖಚಿತ ಕಿರೀಟವನ್ನು ಧರಿಸಿದ ಸ್ವಾಮಿಯು ಗರುಡ ವಾಹನದ ಮೇಲೆ ಆಸೀನನಾಗಿ ಭಕ್ತರಿಗೆ ದರ್ಶನ ನೀಡುವ ದೃಶ್ಯ ಅವಿಸ್ಮರಣೀಯ.
ಈ ವರ್ಷದ ವೈರಮುಡಿ ಉತ್ಸವಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ. ಈಗಾಗಲೇ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ನೆರೆರಾಜ್ಯಗಳಿಂದ ಸಾವಿರಾರು ಭಕ್ತರು ಮಂಡ್ಯಕ್ಕೆ ಆಗಮಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆ, ಕುಡಿಯುವ ನೀರು ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಶಾಂತಿ ಕಾಪಾಡಲು ಮತ್ತು ಸುಗಮ ದರ್ಶನಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವೈರಮುಡಿ ಕಿರೀಟಧಾರಿ ಗರುಢಾರೂಢ ಚೆಲುವನಾರಾಯಣನ ದರ್ಶನ ಪಡೆಯುವುದು ಜನ್ಮಜನ್ಮಗಳ ಪುಣ್ಯ ಎಂಬುದು ಭಕ್ತರ ನಂಬಿಕೆ. ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಮೇಲುಕೋಟೆ ಇಂದು ಭೂಲೋಕದ ವೈಕುಂಠದಂತೆ ಕಾಣಿಸುವುದರಲ್ಲಿ ಅನುಮಾನವೇ ಇಲ್ಲ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
