ಮಂಡ್ಯ ಸೆ.8: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಬೆಂಗಳೂರಿನ ಹಂದರಹಳ್ಳಿ ನಿವಾಸಿಗಳಾದ ಅಭಿಷೇಕ್ (25) ಮತ್ತು ಪ್ರೇಮ್ ಕುಮಾರ್ (23) ಮೃತಪಟ್ಟಿದ್ದಾರೆ. ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಇನ್ನು ಅಪಘಾತದಲ್ಲಿ ಮತ್ತೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ನಾಗಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
