ಮೈಸೂರು: ಕಾವೇರಿ ನದಿಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಹಿನ್ನೀರು, ಒಂದು ಕಾಲದಲ್ಲಿ ಪವಿತ್ರ ತಾಣವಾಗಿದ್ದು, ಈಗ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಕಳೆದ ವಾರ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದ ಈ ಪವಿತ್ರ ಸ್ಥಳವು ಈಗ ಮದ್ಯದ ಪಾರ್ಟಿಗಳು, ಅನೈತಿಕ ಕಾರ್ಯಗಳು, ಮತ್ತು ಪರಿಸರ ಕಲುಷಿತಗೊಳಿಸುವ ಚಟುವಟಿಕೆಗಳಿಂದ ಕಳಂಕಿತವಾಗುತ್ತಿದೆ.
ಹೌದು, ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ತೀರದಲ್ಲಿ ನಿತ್ಯವೂ ಯುವಕ-ಯುವತಿಯರು ಮದ್ಯ ಸೇವಿಸಿ, ಬಾಟಲಿಗಳನ್ನು ಒಡದು, ಪುಂಡಾಟ ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಚಟುವಟಿಕೆಗಳು ಉತ್ತುಂಗಕ್ಕೇರುತ್ತವೆ. ಕೆಲವರು ಕಾರುಗಳನ್ನು ನೀರಿನ ಆಳಕ್ಕಿಳಿಸಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಮದ್ಯದ ಅಮಲಿನಲ್ಲಿ ನೀರಿನಲ್ಲಿ ಇಳಿಯುವವರು ತಮ್ಮ ಜೀವಕ್ಕೆ ಅಪಾಯ ತಂದಿಟ್ಟುಕೊಳ್ಳುತ್ತಿದ್ದಾರೆ. ಈಜಾಡುವ ನೆಪದಲ್ಲಿ ಕೆಲವರು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುವಂತಹ ಅನೈರ್ಮಲ್ಯದ ಕೃತ್ಯಗಳಲ್ಲಿ ತೊಡಗಿದ್ದಾರೆ.
ಕಾವೇರಿ ತೀರದಲ್ಲಿ ರಾಶಿರಾಶಿಯಾಗಿ ಚೆಲ್ಲಿಹೋಗಿರುವ ಪ್ಲಾಸ್ಟಿಕ್ ಪ್ಲೇಟ್‌ಗಳು, ಲೋಟಗಳು, ಮತ್ತು ಖಾಲಿ ಬಿಯರ್ ಬಾಟಲಿಗಳು ಪರಿಸರಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತಿವೆ. ಕಿಡಿಗೇಡಿಗಳು ಬಾಟಲಿಗಳನ್ನು ಪುಡಿಪುಡಿಯಾಗಿ ಒಡೆದು, ಕಾವೇರಿ ತೀರವನ್ನು ಕಸದ ಗುಂಡಿಯನ್ನಾಗಿಸುತ್ತಿದ್ದಾರೆ. ಈ ಚಟುವಟಿಕೆಗಳನ್ನು ತಡೆಯಲು ಸ್ಥಳೀಯ ಆಡಳಿತ ಅಥವಾ ಪೊಲೀಸರಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. “ಹೇಳೋರಿಲ್ಲ, ಕೇಳೋರಿಲ್ಲ” ಎಂಬಂತಹ ಸ್ಥಿತಿ ಮೀನಾಕ್ಷಿಪುರದಲ್ಲಿ ನಿರ್ಮಾಣವಾಗಿದೆ.