2.5 ಲಕ್ಷ ಕೋಟಿ ಸಾಲವೇ ಸಾಧನೆ: ಸಿದ್ದರಾಮಯ್ಯ ಸರ್ಕಾರದ ಮೇಲೆ ಬೊಮ್ಮಾಯಿ ಟೀಕಾಪ್ರಹಾರ

Befunky collage 2025 05 19t191622.813

ಕರ್ನಾಟಕದ ಇತಿಹಾಸದಲ್ಲಿ ಕಳೆದ ಎರಡು ವರ್ಷಗಳು ಆರ್ಥಿಕವಾಗಿ ಕರಾಳವಾಗಿವೆ. ಈ ಅವಧಿಯಲ್ಲಿ 2.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿರುವುದೇ ರಾಜ್ಯ ಸರ್ಕಾರದ ಏಕೈಕ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಅವರು ಲೇವಡಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಎರಡು ವರ್ಷದ ಆಡಳಿತದ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೊಮ್ಮಾಯಿ, ಸರ್ಕಾರವು ಸಂಪೂರ್ಣವಾಗಿ ಸಾಲದ ಮೇಲೆ ಅವಲಂಬಿತವಾಗಿದೆ ಎಂದು ಟೀಕಿಸಿದ್ದಾರೆ. ಪೆಟ್ರೋಲ್, ಡೀಸೆಲ್, ಅಬಕಾರಿ, ಹಾಲು, ನೀರು, ಕಸ, ಮತ್ತು ಸ್ಟಾಂಪ್ ಡ್ಯೂಟಿ ಮೇಲೆ ದಾಖಲೆಯ ತೆರಿಗೆ ವಿಧಿಸಿರುವ ಖ್ಯಾತಿಯೂ ಸಿದ್ದರಾಮಯ್ಯ ಸರ್ಕಾರಕ್ಕೆ ಸೇರುತ್ತದೆ. ಕಳೆದ ವರ್ಷ 40,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹೇರಿದ್ದ ಸರ್ಕಾರ, ಈ ವರ್ಷ 60,000 ಕೋಟಿ ರೂಪಾಯಿಯ ತೆರಿಗೆ ಭಾರವನ್ನು ಜನರ ಮೇಲೆ ಹೊರಿಸಿದೆ ಎಂದು ಬೊಮ್ಮಾಯಿ ಆಕ್ಷೇಪಿಸಿದ್ದಾರೆ.

ಅಭಿವೃದ್ಧಿಯಲ್ಲಿ ಸೊನ್ನೆ

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ನೀರಾವರಿ ಯೋಜನೆಗಳು, ರಾಜ್ಯ ಹೆದ್ದಾರಿಗಳು, ಮನೆ ನಿರ್ಮಾಣಕ್ಕೆ ರಾಜ್ಯದಿಂದ ಯಾವುದೇ ಹಣಕಾಸಿನ ನೆರವು ಇಲ್ಲ. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯದ ವಂತಿಗೆಯ ಹಣವನ್ನೂ ಬಿಡುಗಡೆ ಮಾಡಿಲ್ಲ. “ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವ ಕೆಲಸವನ್ನು ಈ ಸರ್ಕಾರ ಮಾಡಿದೆ,” ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.

ಜನವಿರೋಧಿ ಸರ್ಕಾರ

ಸಿದ್ದರಾಮಯ್ಯ ಸರ್ಕಾರವು ಜನರ ಬಾಯಲ್ಲಿ ಶಾಪವಾಗಿ ಪರಿಣಮಿಸಿದೆ ಎಂದು ವಾಗ್ದಾಳಿ ನಡೆಸಿರುವ ಬೊಮ್ಮಾಯಿ, “ಕರ್ನಾಟಕವನ್ನು ಅಭಿವೃದ್ಧಿಪಡಿಸುವುದಿರಲಿ, ರಾಜ್ಯವನ್ನು ಸಾಲಗಾರ ರಾಜ್ಯವಾಗಿ ಪರಿವರ್ತಿಸಿರುವುದು ದುರದೃಷ್ಟಕರ. ಸಾಧನಾ ಸಮಾವೇಶದ ಹೆಸರಿನಲ್ಲಿ ಯಾವ ಪುರುಷಾರ್ಥವನ್ನು ತೋರಿಸಲು ಸರ್ಕಾರ ಹೊರಟಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದು ಅಭಿವೃದ್ಧಿ ಶೂನ್ಯ, ಜನವಿರೋಧಿ, ಮತ್ತು ಅತ್ಯಂತ ಭ್ರಷ್ಟ ಸರ್ಕಾರ,” ಎಂದು ತೀವ್ರವಾಗಿ ಟೀಕಿಸಿದ್ದಾರೆ.

Exit mobile version